- ಕ್ಯಾತನಹಳ್ಳಿ ಹೆಗ್ಗಡದೇವನಕೋಟೆ ಹಾಗೂ ಮೈಸೂರಿನಿಂದ 28 ಕಿ.ಮೀ. ದೂರದಲ್ಲಿದೆ.
- 2.5 ಅಡಿ ಅಗಲ 4.5 ಅಡಿ ಉದ್ದವಿರುವ ಕಾಯೋತ್ಸರ್ಗ ಭೋಗಿಯಲ್ಲಿರುವ ತೀರ್ಥಂಕರರ ವಿಗ್ರಹ.
- ಯಕ್ಷನ ಪ್ರತಿಮಾ ಲಕ್ಷಣದ ಪ್ರಕಾರ ಧರ್ಮನಾಥ ತೀರ್ಥಂಕರರ ವಿಗ್ರಹವಾಗಿರಬಹುದು.
- ವಿಗ್ರಹದ ಸಂರಕ್ಷಣೆಯ ಪ್ರಯತ್ನಗಳು – ಅಲ್ಲಿಯೇ ಬಸದಿ ನಿರ್ಮಿಸುವುದು ಅಥವಾ ಸಮೀಪದ ಜಿನಮಂದಿರಕ್ಕೆ ವಿಗ್ರಹವನ್ನು ಕೊಂಡೊಯ್ಯುವುದು.
- ಕ್ಯಾತನಹಳ್ಳಿಯಲ್ಲಿ 12 ಜೈನ ನಾಮಧಾರಿ ಗೌಡ ಕುಟುಂಬಗಳಿದ್ದು, 5 ಕಿ.ಮೀ ಸುತ್ತಲಿನ ಪ್ರದೇಶದಲ್ಲಿ 100 ನಾಮಧಾರಿ ಗೌಡ ಜೈನ ಕುಟುಂಬಗಳಿವೆ.
ಕ್ಯಾತನಹಳ್ಳಿ, (ಮೈಸೂರು ಜಿಲ್ಲೆ, ಕರ್ನಾಟಕ), ೨೧ ಜನವರಿ ೨೦೨೫: ಹೊಯ್ಸಳರ ಕಾಲಕ್ಕೆ ಸೇರಿದ ಪುರಾತನವಾದ ಕಾಯೋತ್ಸರ್ಗಯುಕ್ತ ಜೈನ ತೀರ್ಥಂಕರರ ವಿಗ್ರಹವು ಪತ್ತೆಯಾಗಿದೆ. ಟ್ರ್ಯಾಕ್ಟರ್ ಮೂಲಕ ನೆಲದ ಉಳುಮೆ ಮಾಡುವಾಗ ಪತ್ತೆಯಾದ ವಿಗ್ರಹವು 2.5 ಅಡಿ ಅಗಲ 4.5 ಅಡಿ ಉದ್ದವಿದೆ.
ಕ್ಯಾತನಹಳ್ಳಿ ಗ್ರಾಮವು ಹೆಗ್ಗಡದೇವನಕೋಟೆ ತಾಲೂಕಿನಲ್ಲಿದ್ದು, ಹೆಗ್ಗಡದೇವನಕೋಟೆ ಹಾಗೂ ಮೈಸೂರಿನಿಂದ 28 ಕಿ.ಮೀ. ಹಾಗೂ ಸರಗೂರಿನಿಂದ 33 ಕಿ.ಮೀ. ದೂರದಲ್ಲಿದೆ.
ಹೊಯ್ಸಳರ ಕಾಲದ ಶಿಲ್ಪ: ವಾಸ್ತುಶಿಲ್ಪ ತಜ್ಞರಾದ ಮೈಸೂರಿನ ಪ್ರಭಾಕರ್ ಮನೆವಾರ್ತೆ ಹಾಗೂ ಸಂಶೋಧಕ ಪವನ್ ಮೌರ್ಯ ಚಕ್ರವರ್ತಿ ಇವರುಗಳು ವಿಗ್ರಹ ದೊರೆತ ಸ್ಥಳಕ್ಕೆ ಭೇಟಿ ನೀಡಿದ್ದರು. ವಿಗ್ರಹವು ಬಸದಿಗಳ ನಿರ್ಮಾಣ ಹಾಗೂ ಶಿಲ್ಪ ಕಲೆಯ ಸುವರ್ಣ ಯುಗವಾಗಿದ್ದ ಹೊಯ್ಸಳರ ಕಾಲಕ್ಕೆ ಸೇರಿದ್ದೆಂದು ಅಭಿಪ್ರಾಯ ಪಟ್ಟಿದ್ದಾರೆ.
ಯಾವ ತೀರ್ಥಂಕರರ ವಿಗ್ರಹ? “ಇದು ದಿಗಂಬರ ಜೈನ ತೀರ್ಥಂಕರರ ಶಿಲ್ಪವಾಗಿದ್ದು ಯಾವುದೇ ಚಿಹ್ನೆಗಳಿಲ್ಲ. ಆದರೆ ಇಕ್ಕೆಲಗಳಲ್ಲಿರುವ ಯಕ್ಷ-ಯಕ್ಷಿಯರ ಶಿಲ್ಪದ ಮೂಲಕ ಹಾಗೂ ಯಕ್ಷನ ಪ್ರತಿಮಾ ಲಕ್ಷಣದ ಪ್ರಕಾರ ಅದು ಜೈನಧರ್ಮದ ೧೫ನೇ ತೀರ್ಥಂಕರರಾದ ಧರ್ಮನಾಥ ತೀರ್ಥಂಕರರ ಯಕ್ಷ ಕಿನ್ನರನಾಗಿರಬಹುದೆಂದು ಹಾಗೂ ಈ ಹಿನ್ನೆಲೆಯಲ್ಲಿ ಈ ವಿಗ್ರಹವು ಧರ್ಮನಾಥ ತೀರ್ಥಂಕರರ ವಿಗ್ರಹವಾಗಿರಬಹುದು ಎಂದು”, ಜೈನ ಸಂಶೋಧಕರು ಹಾಗೂ ಜೈನ್ ಹೆರಿಟೇಜ್ ಸೆಂಟರ್ಸ.ಕಾಂ ನ ಸಂಸ್ಥಾಪಕರಾದ ನಿತಿನ್ ಹೆಚ್.ಪಿ. ಅಭಿಪ್ರಾಯ ಪಟ್ಟಿದ್ದಾರೆ.
ವಿಗ್ರಹದ ಸಂರಕ್ಷಣೆ: ಪ್ರಸ್ತುತ ವಿಗ್ರಹವನ್ನು ಕ್ಯಾತನಹಳ್ಳಿಯ ಲಕ್ಷ್ಮೀನಾರಾಯಣ ದೇವಾಲಯದ ಆವರಣದಲ್ಲಿ ಇರಿಸಲಾಗಿದೆ. ಕ್ಯಾತನಹಳ್ಳಿಗೆ ಭೇಟಿ ನೀಡಿದ್ದ ಸರಗೂರು, ಚಕ್ಕೂರು, ನಿಲುವಾಗಿಲು, ಗುಜ್ಜಪ್ಪನ ಹುಂಡಿಯ ನಾಮಧಾರಿಗೌಡ ಜೈನ ಸಮಾಜದ ಬಾಂಧವರು ಎಸ್.ಎಸ್.ಸೋಮಪ್ರಭ ಹಾಗೂ ಮೈಸೂರು ಜೈನ ಸಮಾಜದ ಬಾಂಧವರು ಶ್ರೀ ಎನ್.ಪ್ರಸನ್ನಕುಮಾರ್ ರವರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ವಿಗ್ರಹವನ್ನು ನೀಡುವುದಾದರೆ ಹತ್ತಿರದ ಜೈನ ಬಸದಿಗೆ ಕೊಂಡೊಯ್ಯಲಾಗುವುದು ಅಥವಾ ಗ್ರಾಮಸ್ಥರು ಆಸಕ್ತಿ ತೋರಿದಲ್ಲಿ ಅಲ್ಲಿಯೇ ಹೊಸ ಬಸದಿಯನ್ನು ನಿರ್ಮಾಣ ಮಾಡುವ ಬಗ್ಗೆ ಚಿಂತಿಸಬಹುದೆಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಚರ್ಚಿಸಿ ಜೈನ ಸಮಾಜಕ್ಕೆ ತಿಳಿಸಲಿದ್ದಾರೆ.
ಕ್ಯಾನಹಳ್ಳಿಯ ಜೈನ ಪರಂಪರೆ: ಕ್ಯಾತನಹಳ್ಳಿಯಲ್ಲಿ 12 ಜೈನ ನಾಮಧಾರಿ ಗೌಡ ಕುಟುಂಬಗಳಿದ್ದು 5 ಕಿ.ಮೀ ಸುತ್ತಲಿನ ಪ್ರದೇಶದಲ್ಲಿ 100 ನಾಮಧಾರಿ ಗೌಡ ಜೈನ ಕುಟುಂಬಗಳಿವೆ. ನಾಮಧಾರಿ ಗೌಡ ಜೈನ ಕುಟುಂಬಗಳು ಹಾಗೂ ಪ್ರಸ್ತುತ ದೊರೆತಿರುವ ಜೈನ ತೀರ್ಥಂಕರರ ವಿಗ್ರಹವು ಕ್ಯಾತನಹಳ್ಳಿಯು ಒಂದು ಕಾಲದಲ್ಲಿ ಪ್ರಮುಖ ಜೈನ ಕೇಂದ್ರವಾಗಿತ್ತೆಂದು ನಿರ್ಧರಿಸಲು ಸಾಕಷ್ಟು ಪುರಾವೆಗಳನ್ನು ಒದಗಿಸುತ್ತದೆ.
– ಜೈನ್ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವೀಸ್, ಸರಗೂರಿನ ಶ್ರೀ ಎಸ್ ಎಸ್ ಸೋಮಪ್ರಭು ರವರಿಂದ ಮಾಹಿತಿ, ಚಿತ್ರ ಕೃಪೆ: ಪವನ್ ಮೌರ್ಯ ಚಕ್ರವರ್ತಿ ಎ.