ಶೃಂಗೇರಿಯ ಪಾರ್ಶ್ವನಾಥ ಬಸದಿಯಲ್ಲಿರುವ ಕ್ರಿ.ಶ. 1161 ಕ್ಕೆ ಸೇರಿದ ಬಸದಿಯ ಸ್ಥಾಪನೆಯ ವಿವರ ಹಾಗೂ ಬಸದಿಗೆ ದಾನ ನೀಡಿದ ವಿವರಗಳನ್ನೊದಗಿಸುವ ಶಾಸನ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ.
ಶಾಸನದ ಸ್ಥಳ – ಪಾರ್ಶ್ವನಾಥ ಬಸದಿಯ ನವರಂಗದಲ್ಲಿಟ್ಟಿರುವ ಶಾಸನ.
ಶಾಸನದ ಕಾಲ – ಶಾಸನೋಕ್ತ ಕಾಲವು ಶಕವರ್ಷ ೧೦೮೮, ವಿಕ್ರಮ ಸಂವತ್ಸರದ, ಕುಂಬ (ಮಾಸ), ಶುದ್ಧ ದಶಮಿ ಗುರುವಾರ ಎಂದಿದೆ. ಇದು ಕ್ರಿ.ಶ ಫೆಬ್ರವರಿ ೭ ೧೧೬೧ರ ಮಂಗಳವಾರಕ್ಕೆ ಸರಿಹೊಂದುತ್ತದೆ.
ಶಾಸನದ ಮುಖ್ಯಾಂಶಗಳು –
- ಶಾಸನವು ಬಸದಿಯ ನಿರ್ಮಾಣದ ವಿವರಗಳನ್ನು ನೀಡುತ್ತಾ, ಯಾವ ವ್ಯಕ್ತಿಯ ನೆನಪಿನಲ್ಲಿ ಬಸದಿಯನ್ನು ನಿರ್ಮಾಣ ಮಾಡಲಾಯಿತೋ ಆತನ ಕುಟುಂಬದ ವಂಶ ವೃಕ್ಷವನ್ನು ನೀಡುತ್ತದೆ.
- ಬಸದಿಗಾಗಿ ಮಾಡಲಾದ ದಾನದ ವಿವರಗಳನ್ನು ನೀಡುತ್ತದೆ.
ಶಾಸನದ ವಿವರ
ಶ್ರೇಷ್ಠವೂ ಗಂಭೀರವೂ ಆದ ಸ್ವಾಗ್ವಾದವೆಂಬ ಲಾಂಛನಯುಕ್ತನಾದ ಮೂರುಲೋಕಗಳಿಗೆ ಒಡೆಯನಾದ ತ್ರೈಲೋಕ್ಯನಾಥನ ಜಿನಶಾಸನವು ಜಯಿಸಲಿ.
ಬಸದಿಯ ನಿರ್ಮಾಣ ವಿವರ – ನಿಡುಗೋಡಿನ ವಿಜಯನಾರಾಯಣ ಶಾಂತಿಸೆಟ್ಟಿಯ ಮಗ ಬಾಸಿಸೆಟ್ಟಿ ಇವನ ಅಕ್ಕ ಸಿರಿಯಜ್ಜಿ ಸೆಟ್ಟಿತಿ. ಈಕೆಯ ಮಗಳು ನಾಗವೆಸೆಟ್ಟಿತಿ, ಈಕೆಯ ಮಗಳು ಸಿರಿಯಲೆಸೆಟ್ಟತಿ. ಸಿರಿಯಲೆಸೆಟ್ಟಿತಿ ಹಾಗೂ ಹೆಮ್ಮಾಡಿಸೆಟ್ಟಿ ದಂಪತಿಗಳ ಮಗನಾದ ಮಾರಿಸೆಟ್ಟಿಯ ಜ್ಞಾಪಕಾರ್ಥವಾಗಿ ಈ ಬಸದಿಯನ್ನು ನಿರ್ಮಿಸಲಾಯಿತು.
ಶಾಸನವು ಸ್ವಲ್ಪ ತುಟಿತವಾಗಿರುವುದರಿಂದ ಈ ಬಸದಿಗೆ ಬಿಟ್ಟ ಭೂದಾನ ಮತ್ತು ತೆರಿಗೆಗಳ ವಿಚಾರ ಅಸ್ಪಷ್ಟವಾಗಿದೆ.
ದಾನದ ವಿವರ – ಒಂದು ಬಂಡಿ, ಹೊಳೆ(?) ಹದುವಿನ ಹೊರದ ಒಂದು ಖಂಡುಗ ಮಣ್ಣು, ಸುಳ್ಳಿಗೋಡಿನಲ್ಲಿ ಆರು ಖಂಡುಗದಷ್ಟು ಭೂಮಿಯನ್ನು ಹಣವನ್ನು, ಒಬ್ಬಳು ಸೇವಕಿ(ತೊತ್ತು), ಒಂದು ಹೇರು ಉಪ್ಪು, ಐವತ್ತಲೆ, ಅರಸಿನ ಮಳವೆಗೆ ವೀಸ(?) ಇವುಗಳನ್ನು ಬಸದಿಗೆ ದಾನ ನೀಡಲಾಯಿತು.
ಶಾಪಾಶಯ – ಶಾಸನವು ಶಾಪಾಶಯದೊಂದಿಗೆ ಮುಕ್ತಾಯವಾಗುತ್ತದೆ. ಈ ಶಾಸನದಲ್ಲಿರುವ ವಿವರಗಳನ್ನು ಪಾಲಿಸದವರು ಸಾವಿರ ಜನರನ್ನು ಹತ್ಯೆಗೈದ ಪಾಪಕ್ಕೊಳಗಾಗುತ್ತಾರೆ ಎಂದಿದೆ.
ಉಲ್ಲೇಖಗಳು
- ECXI(R) Sg.2
- MAR 1933 No.3
- ಕರ್ನಾಟಕ ಜೈನ ಶಾಸನಗಳು – ಸಂಪುಟ ೨, ಪುಟ – ೪೫೬-೪೫೭, ಮುಖ್ಯ ಸಂಪಾದಕರು: ಡಾ.ದೇವರಕೊಂಡಾರೆಡ್ಡಿ