Skip to content
Home » ಕನ್ನಡ » ಜಿನ ರತ್ನ ಭೂಷಣರು » ಪೊನ್ನ

ಪೊನ್ನ

    ಪೊನ್ನ ಕವಿ ಒಬ್ಬ ಕವಿ ಚಕ್ರವರ್ತಿ ಮತ್ತು ರತ್ನತ್ರಯರಲ್ಲಿ ಒಬ್ಬ. ಈತನಿಗೆ ಪೊನ್ನಿಗ, ಪೊನ್ನಮಯ್ಯ ಎಂಬ ಹೆಸರುಗಳೂ ಉಂಟು.

    ಪೊನ್ನ: ಪೋಸ್ಟಕಾರ್ಡ್ ಕಲ್ಪನೆ – ಮಹಾವೀರ್ ಕುಂದೂರ್, ವರ್ಣಚಿತ್ರ – ಶ್ರೀ ಸುರೇಶ್ ಅರ್ಕಸಾಲಿ, ಹುಬ್ಬಳ್ಳಿ; ಕಲೆ – ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ.

    ವಿಮರ್ಶಕರು ಪೊನ್ನನ ಕಾಲವನ್ನು ಸುಮಾರು ಕ್ರಿ.ಶ. ೯೫೦ ಎಂದು ಪರಿಗಣಿಸಿದ್ದಾರೆ. ಪೊನ್ನನು ಜನ್ಮತ ಒಬ್ಬ ಜೈನ, ಕಮ್ಮನಾಡಿನ ವೆಂಗಿಬಿಷಯ ಎಂಬ ಪ್ರಾಂತ್ಯಕ್ಕೆ ಸೇರಿದವನು. ಇದು ಈಗಿನ ಆಂಧ್ರದ ಚಿತ್ತೂರು ಜಿಲ್ಲೆಯ ಪುಂಗನೂರು ಪ್ರದೇಶದಿಂದ ಈಗಿನ ಗುಲ್ಬರ್ಗಾ ಜಿಲ್ಲೆಗೆ ಸೇರಿದ ರಾಷ್ಟ್ರಕೂಟರ ರಾಜಧಾನಿಯಾದ ಮಾನ್ಯಖೇತಕ್ಕೆ ವಲಸೆ ಬಂದನೆಂದು ವಿದ್ವಾಂಸರ ಅಭಿಪ್ರಾಯವಾಗಿದೆ.
    ಇಂದ್ರನಂದಿಮುನಿ ತನ್ನ ವಿದ್ಯಾಗುರುವೆಂದೂ, ಜಿನಚಂದ್ರ ಮುನೀಂದ್ರ ತನ್ನ ಧಾರ್ಮಿಕ ಗುರುವೆಂದೂ ಪೊನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ.
    ಪೊನ್ನ ರಾಷ್ಟ್ರಕೂಟರ ದೊರೆ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿದ್ದು “ಉಭಯಕವಿ ಚಕ್ರವರ್ತಿ” ಎಂಬ ಬಿರುದನ್ನು ಪಡೆದಿದ್ದ. ಈತ ಕವಿ, ಗಮಕಿ, ವಾದಿ, ವಾಗ್ಮಿಯಾಗಿದ್ದನೆಂದೂ ಸರ್ವದೇವ ಕವೀಂದ್ರನೆಂಬ ಬಿರುದು ಪಡೆದಿದ್ದುದಾಗಿಯೂ ತಿಳಿದುಬರುತ್ತದೆ.

    ಕವಿ ತನ್ನನ್ನು “ಕುರುಳ್ಗಳ ಸವಣ” ಎಂದು ಹೇಳಿಕೊಂಡಿರುವುದನ್ನು ಗಮನಿಸಿದರೆ ಕವಿಯ ನಿರ್ಲಿಪ್ತ ಮನೋಭಾವ ವ್ಯಕ್ತವಾಗುತ್ತದೆ. ಕೃಷ್ಣಚಕ್ರವರ್ತಿಯಿಂದ ಧನ, ಕನಕ, ಕೀರ್ತಿ, ಪ್ರತಿಷ್ಠೆಗಳನ್ನು ಗಳಿಸಿದ್ದರೂ ಲೌಕಿಕ ವ್ಯಾಮೋಹದಿಂದ ದೂರಾಗಿದ್ದ ಭವ್ಯ ವ್ಯಕ್ತಿತ್ಯ ಪೊನ್ನನದಾಗಿತ್ತು.

    ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಆಶ್ರಯದಲ್ಲಿ ಭುವನೈಕ ರಾಮಾಭ್ಯುದಯವನ್ನು ರಚಿಸಿದ ಪೊನ್ನ ಚಾಲುಕ್ಯ ಚಮೂಪತಿಗಳಾಗಿದ್ದ ಮಲ್ಲಪ್ಪಯ್ಯ ಪುನ್ನಮಯ್ಯರ ಆಶ್ರಯದಲ್ಲಿ ಶಾಂತಿಪುರಾಣವನ್ನು ಬರೆದ.
    ಪೊನ್ನನ ಹೆಸರಿನಲ್ಲಿರುವ ಕೃತಿಗಳೆಂದರೆ : ಶಾಂತಿಪುರಾಣ, ಭುವನೈಕ ರಾಮಾಭ್ಯುದಯ, ಜಿನಾಕ್ಷರ ಮಾಲೆ, ಗತಪ್ರತ್ಯಾಗತ, ಅಲಂಕಾರ, ಆದಿಪುರಾಣಮು, ವಿರಾಟಮು. ಇವುಗಳಲ್ಲಿ ಶಾಂತಿಪುರಾಣ ಮತ್ತು ಜಿನಾಕ್ಷರ ಮಾಲೆಗಳೂ ಉಪಲಬ್ದವಿದ್ದು ಉಳಿದವು ಕಾಲಗರ್ಭದಲ್ಲಿ ಅಡಗಿಹೋಗಿವೆ.

    ಭುವನೈಕರಾಮಾಭ್ಯುದಯವನ್ನು ಕುರಿತು ಪೊನ್ನ ತನ್ನ ಶಾಂತಿಪುರಾಣದಲ್ಲಿ ಪ್ರಸ್ತಾಪಿಸಿದ್ದಾನೆ. ೧೪ ಭುವನಂಗಳಿಗೆ ಸರಿಸಮಾನವಾದಂಥ ೧೪ ಆಶ್ವಾಸಗಳುಳ್ಳ ಭುವನೈಕ ರಾಮಾಭ್ಯುದಯದ ಕಥಾವಸ್ತು ರಾಮಕಥೆಯೆಂದು ಶಾಂತಿಪುರಾಣದಲ್ಲಿ ಹೇಳಲಾಗಿದೆ. ಕಾವ್ಯಾವಲೋಕನ, ಶಬ್ದಮಣಿದರ್ಪಣ, ಸೂಕ್ತಿಸುಧಾರ್ಣವ, ಕಾವ್ಯಸಾರಗಳಲ್ಲಿ ದೂರಕುವ ಕೆಲವು ಲಕ್ಷಪದ್ಯಗಳನ್ನು ಭುವನೈಕ ರಾಮಾಭ್ಯುದಯದಿಂದ ಆಯ್ದವೆಂದು ಗುರುತಿಸಲಾಗಿದೆ. ಅವುಗಳ ಆಧಾರದ ಮೇಲೆ ಭುವನೈಕ ರಾಮಾಭ್ಯುದಯ ವೈದಿಕ ಸಂಪ್ರದಾಯದ ರಾಮಾಯಣವೆಂದು ತಿಳಿದುಬರುತ್ತದೆ. ಸಮಕಾಲೀನ ಸಂಪ್ರದಾಯದಂತೆ ಈ ಲೌಕಿಕ ಕೃತಿಯಲ್ಲಿ ಕಥಾನಾಯಕ ರಾಮನೊಡನೆ, ತನ್ನ ಆಶ್ರಯದಾತ ರಾಷ್ಟçಕೂಟ ಮುಮ್ಮಡಿ ಕೃಷ್ಣನನ್ನು ಒಂದುಗೂಡಿಸಿ ಹೇಳಿದ್ದಾನೆ. ಭುವನೈಕರಾಮ ಎಂದು ದೊರೆ ಕೃಷ್ಣ್ಯನಿಗೆ ಸಂದ ಬಿರುದೇ ಇಲ್ಲಿ ಕಾವ್ಯದ ಶಿರೋನಾಮೆಯಾಗಿದೆ. ತೆಕ್ಕೋಲ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಮೂವಡಿ ಚೋಳ ರಾಜಾದಿತ್ಯನ ಮೇಲೆ ರಾಷ್ಟçಕೂಟ ಮುಮ್ಮಡಿ ಕೃಷ್ಣ ಸಾಧಿಸಿದ ವಿಜಯದ ಸಂದರ್ಭದಲ್ಲಿ ಈ ಕೃತಿ ಜನ್ಮ ತಳೆಯಿತು.

    ಪೊನ್ನ ತಾನು ‘ಗತಪ್ರತ್ಯಾಗತ’ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದುದಾಗಿಯೂ ಅದರಿಂದ ತನಗೆ ಉಭಯ ಕವಿ ಚಕ್ರವರ್ತಿ ಬಿರುದು ದೊರೆತುದಾಗಿಯೂ ತನ್ನ ಶಾಂತಿಪುರಾಣದಲ್ಲಿ ಹೇಳಿಕೊಂಡಿದ್ದಾನೆ.
    ಆದಿಪುರಾಣಮು ಮತ್ತು ವಿರಾಟಮು ಎಂಬ ತೆಲುಗು ಕೃತಿಗಳನ್ನು ಸರ್ವದೇವನೆಂಬ ಕವಿ ರಚಿಸಿದನೆಂದು ತೆಲುಗು ಸಾಹಿತ್ಯ ಚರಿತ್ರಕಾರರು ಹೇಳುತ್ತಾರೆ; ಈ ಸರ್ವದೇವ ಮತ್ತು ಕನ್ನಡದ ಪೊನ್ನ ಒಬ್ಬನೇ ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

    ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಪೊನ್ನನ ವರ್ಣಚಿತ್ರದ ಪೋಸ್ಟಕಾರ್ಡ್.

    ಆದಿವುರಾಣಮು ಮತ್ತು ವಿರಾಟಮು ಕೃತಿಗಳು ಕಣ್ಮರೆಯಾಗಿವೆ. ಲಕ್ಷಣಸಾರ ಎಂಬ ಛಂದೋಗ್ರಂಥ ಮತ್ತು ಪ್ರಬಂಧಮಣಿಭೂಷಣಮು ಎಂಬ ಸಂಕಲನ ಗ್ರಂಥಗಳಲ್ಲಿ ಸರ್ವದೇವನ ಕೃತಿಗಳಿಂದ ಆಯ್ದ ಕೆಲವು ಲಕ್ಷö್ಯಪದ್ಯಗಳು ದೊರೆಯುತ್ತವೆ. ಪೊನ್ನನು ಕನ್ನಡದಲ್ಲಿಯಂತೆ ತೆಲುಗಿನಲ್ಲಿಯೂ ಆದಿಪುರಾಣಮು ಎಂಬ ಧಾರ್ಮಿಕ ಕಾವ್ಯವನ್ನೂ, ವಿರಾಟಮು ಎಂಬ ಲೌಕಿಕ ಖಂಡಕಾವ್ಯವನ್ನೂ ಬರೆದಿರುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯವಿದೆ. ಮಲ್ಲಪಯ್ಯ ಪುನ್ನಮಯ್ಯರ ಆಶ್ರಯ ಪಡೆದು ಪುಂಗನೂರಿನಲ್ಲಿ ನೆಲಸಿದ ಈ ಕವಿ ತೆಲುಗು ಸಾಹಿತ್ಯವನ್ನೂ ಅಭ್ಯಸಿಸಿ ಕೃತಿರಚನೆ ಮಾಡಿರುವ ಸಾಧ್ಯತೆ ಉಂಟು ಎಂಬುದು ವಿದ್ವಜ್ಜನರ ಊಹೆ.
    ಜಿನಾಕ್ಷರ ಮಾಲೆ ಪೊನ್ನನ ಉಪಲಬ್ಧ ಕೃತಿಗಳಲ್ಲೊಂದಾಗಿದೆ. ೩೯ ಕಂದಪದ್ಯಗಳ ಸ್ತೋತ್ರ ರೂಪದ ಈ ಕೃತಿಯಲ್ಲಿ ೨೫ ವರ್ಗೀಯ ವ್ಯಂಜನಗಳು ಹಾಗೂ ೧೨ ಆವರ್ಗೀಯ ವ್ಯಂಜನಗಳನ್ನು ಅಂತಾದಿಕ್ರಮದಲ್ಲಿ ಹೊಂದಿಸಲಾಗಿದೆ. ಕುರುಳ್ಗಳ ಸವಣ ಎಂಬ ನಾಮಾಂಕಿತದಲ್ಲಿಯೇ ಹೆಣೆಯಲಾದ ಈ ಕೃತಿಗಳಲ್ಲಿ ಕವಿಯ ಹೆಸರು ಎಲ್ಲಿಯೂ ಇಲ್ಲ.
    ಪೊನ್ನ ಕವಿಯ ಮತ್ತೊಂದು ಉಪಲಬ್ಧ ಕೃತಿ ಶಾಂತಿಪುರಾಣ. ಹದಿನಾರನೆಯ ತೀರ್ಥಂಕರನೂ, ಐದನೆಯ ಚಕ್ರವರ್ತಿಯೂ ಆದ ಶಾಂತಿನಾಥನನ್ನು ಕುರಿತು ಕನ್ನಡದಲ್ಲಿ ರೂಪಿತವಾದ ಮೊದಲ ಕೃತಿಯಿದು. ಈ ಕೃತಿಗೆ ಆಸಗ ಕವಿಯ ಸಂಸ್ಕೃತ ಶಾಂತಿಪುರಾಣವು ಆಕರವಾಗಿದೆ. ೧೨ ಆಶ್ವಾಸಗಳುಳ್ಳ ಈ ಚಂಪೂ ಕೃತಿಯಲ್ಲಿ ಶ್ರೀಷೇಣ, ಭೂಗಭೂಮಿಜ, ಶ್ರೀದೇವ, ಅಮಿತತೇಜ, ಮಣಿಚೂಳ, ಅಪರಾಜಿತ, ಅಚ್ಯುತೇಂದ್ರ, ವಜ್ರಾಯುಧ, ಅಹಮಿಂದ್ರ, ಮೇಘರಥ, ಮಹೇಂದ್ರ- ಈ ಹನ್ನೊಂದು ಭವಗಳಲ್ಲಿ ತೊಳಲಿ ಬಂದ ಜೀವ ಶಾಂತಿನಾಥನಾಗಿ ಜಿನತ್ಯವನ್ನು ಪಡೆಯುತ್ತದೆ. ಕಥನಕ್ರಮದಲ್ಲಿ ಅಸಗನನ್ನೇ ಅನುಸರಿಸಿರುವ ಪೊನ್ನ ಕವಿ ವರ್ಣನೆಗಳಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾನೆ. ಪಾತ್ರಗಳಿಗೆ ಮಾನವೀಯತೆಯ ಮೆರುಗನ್ನಿತ್ತು ಸಜೀವವಾಗಿಸಿದ್ದಾನೆ. ಇದರಲ್ಲಿ ಜಿನ ಜನಾಭಿಷೇಕದ ಭಾಗವನ್ನು ಪಂಪನಿಂದ ಸ್ವೀಕರಿಸಿದ್ದಾನೆ. ಜ್ಯೋತಿಃ ಪ್ರಭಾ ಸ್ವಯಂವರ ಸಂದರ್ಭವನ್ನು ಕಾಳಿದಾಸನ ರಘುವಂಶದಿಂದ ಭಾಷಾಂತರಿಸಿದ್ದಾನೆ. ಶಾಂತಿನಾಥನ ದಿಗ್ವಿಜಯ ವರ್ಣನೆಯಲ್ಲಿ ರಘುವಂಶದ ರಘು ಮಹಾರಾಜನ ದಿಗಿಜಯ ವರ್ಣನೆಯನ್ನು ಬಿಂಬಿಸಿದ್ದಾನೆ. ಸುಂದರ ವರ್ಣನೆಗಳಿಂದ ಕೂಡಿದ ಶಾಂತಿನಾಥ ಪುರಾಣ ಕೇವಲ ಧಾರ್ಮಿಕ ಪುರಾಣವಾಗಿರದೆ ಕಾವ್ಯವೂ ಆಗಿದೆ. ಶಾಂತಿಪುರಾಣವು ಧಾರ್ಮಿಕ ವಿಷಯಗಳ ನಿರೂಪಣೆಯಲ್ಲಿ ಸರಳತೆಯನ್ನಳವಡಿಸಿಕೊಂಡ ಕೃತಿ ಎಂದೆನಿಸಿದೆ.

    ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ಪೊನ್ನನ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.

    Visit this link for an article About “Ponna” in English

    error: Jain Heritage Centres - Celebrating Jain Heritage.....Globally!