ಶ್ರವಣಬೆಳಗೊಳ, 8 ಡಿಸೆಂಬರ್ 2019: ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಮಸ್ತ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಗಳವರು “ಸಿದ್ಧಾಂತ ಚಿಂತಾಮಣಿ” ಎಂಬ ಉಪಾದಿಯನ್ನು ಸಮರ್ಪಿಸಿದರು. ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮೀಜಿಯವರ 50 ನೇ ವರ್ಷದ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಈ ಉಪಾದಿಯನ್ನು ಸಮರ್ಪಿಸಲಾಯಿತು.
ಧರ್ಮದ ಹಾದಿಯಲ್ಲಿ ನಡೆದರೆ ಮಾತ್ರ ಜೀವನದಲ್ಲಿ ಮುಕ್ತಿ ಹೊಂದಲು ಸಾಧ್ಯ ಎಂದು ತಮಿಳುನಾಡಿನ ಅರಹಂತಗಿರಿ ಮಠದ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೆಳಿದರು.
ಮಠ-ಮಾನ್ಯಗಳು ಶಾಲೆಯಾದರೆ, ಸ್ವಾಮೀಜಿಗಳು ಅಧ್ಯಾಪಕರಿದ್ದಂತೆ. ಭಕ್ತಿ-ಭಾವದ ಶಿಕ್ಷಣದೊಂದಿಗೆ ಅವರ ಮಾರ್ಗದರ್ಶನ ಪಡೆದು ಸದ್ಮಾರ್ಗದಲ್ಲಿ ನಡೆದರೆ ಬದುಕು ಹಸನಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಒಡಕು ಕಾಣಿಸುತಿದ್ದು, ದಾರಿ ಬದಲಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಾರಿ ಬದಲಿಸಿ ಹೋಗಬೇಡಿ, ಗುರು-ಹಿರಿಯರು ಹಾಕಿಕೊಟ್ಟಿರುವ ಧರ್ಮ ಹಾಗೂ ಸಂಪ್ರದಾಯದ ತಳಹದಿಯ ಮೇಲೆ ಮೌಲ್ಯಯುತ ಜೀವನ ಕಟ್ಟಿಕೊಳ್ಳಿ, ಮಠಾಧೀಶರ ಮಾರ್ಗದರ್ಶನ ಪಡೆದು ಸಾಂಪ್ರದಾಯಿಕ ವಿಚಾರಧಾರೆ ಮನಗಂಡು ಒಗ್ಗಟ್ಟಿನೊಂದಿಗೆ ಸಾಗಬೇಕು ಎಂದು ಸಲಹೆ ನೀಡಿದರು.
ಹೊಂಬುಜ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಜೈನಕಾಶಿಯಲ್ಲಿ 12 ವರ್ಷಗಳಿಗೊಮ್ಮೆ ಭಗವಾನ್ ಬಾಹುಬಲಿ ಸ್ವಾಮಿಗೆ 4 ಮಹಾಮಸ್ತಕಾಭಿಷೇಕಗಳು ಶ್ರೀಗಳ ನೇತ್ರತ್ವದಲ್ಲಿ ಜರುಗಿವೆ ಎಂದು ಹೇಳಿದರು.
ಅಂತರಾಷ್ಟ್ರೀಯ ಪ್ರಾಕೃತ ಸಮ್ಮೇಳನ, ರಾಷ್ಟ್ರೀಯ ವಿದ್ವತ್ ಸಮ್ಮೇಳನ, ರಾಷ್ಟ್ರೀಯ ಯುವ ಸಮ್ಮೇಳನ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ ಹೀಗೆ ಹಲವಾರು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಹೆಗ್ಗಳಿಕೆಯು ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಅಲ್ಲದೆ ಪ್ರಾಕೃತ ಭಾಷೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಪೂಜ್ಯ ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದರು.
ಕನಕಗಿರಿ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕಂಬದಹಳ್ಳಿ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಸೋಂದಾ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಎನ್.ಆರ್.ಪುರ ಮಠದ ಸ್ವಸ್ತಿಶ್ರೀ ಲಕ್ಷಿö್ಮÃಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಆರತಿಪುರ ಮಠದ ಸ್ವಸ್ತಿಶ್ರೀ ಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ನಾದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಧಸರೀಘಟ್ಟ ಶಾಖಾಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಮತ್ತು ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥಸ್ವಾಮೀಜಿ ಉಪಸ್ಥಿತರಿದ್ದರು. – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ