- ಪದ್ಮಾವತಿ ಅಮ್ಮನವರ ಬಸದಿಯ ಹಿಂದಿನ ಲಕ್ಕಿಗಿಡದ ಒತ್ತುಗಟ್ಟೆಯ ಗೋಡೆಯಲ್ಲಿದ್ದ ಶಾಸನಗಂಭ.
- ಶ್ರೀ ಕ್ಷೇತ್ರ ಹೊಂಬುಜದ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ದೊರೆತ ಶಾಸನ.
- “ಕಂದುಕ ಕ್ರೀಡೆ”ಗೆ ಸಂಬಂಧಿಸಿದ ಶಿಲ್ಪ ಸಹಿತವಾದ ವಿಶ್ವದ ಅತಿ ಪುರಾತನ ಶಾಸನ.
- ಶಾಸನವು ಸಾಂತರ ಅರಸನಾದ ತ್ರೈಳೋಕ್ಯಮಲ್ಲ ಎರಡನೆಯ ವೀರಸಾನ್ತರನು ಕಂದುಕ ಕ್ರೀಡೆಯಾಡುವುದರಲ್ಲಿನ ಪ್ರಾವೀಣ್ಯತೆ, ಆತನ ದಾನಗುಣ ಹಾಗೂ ಪರಾಕ್ರಮವನ್ನು ಕೊಂಡಾಡುತ್ತದೆ.
- ತ್ರೈಳೋಕ್ಯಮಲ್ಲ ಎರಡನೆಯ ವೀರಸಾನ್ತರನು “ಕಂದುಕಬ್ರಹ್ಮ” ನೆಂಬ ಬಿರುದು ಪಡೆದಿದ್ದನೆಂದ ತಿಳಿಸುತ್ತದೆ.
- ಹೊಂಬುಜದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಕೈಗೊಳ್ಳಲಾದ ಸಂಶೋಧನೆ.
- ಹರಿಹರದ ಡಾ.ರವಿಕುಮಾರ ಕೆ. ನವಲಗುಂದರವರ ಸಂಶೋಧನೆ.
ಹೊಂಬುಜ (ಶಿವಮೊಗ್ಗ ಜಿಲ್ಲೆ), ೨೧ ಜನವರಿ ೨೦೨೩: ಶ್ರೀಕ್ಷೇತ್ರ ಹೊಂಬುಜದಲ್ಲಿ ಇತ್ತೀಚೆಗೆ ಶಿಲ್ಪ ಸಹಿತ ಕಂದುಕ ಕ್ರೀಡೆಯ ಮಹತ್ವದ ಮೊದಲ ಶಾಸನವೊಂದು ಪತ್ತೆಯಾಗಿದೆ. ಸ್ವಸ್ತಿ ಶ್ರೀ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರ ನೇತೃತ್ವದಲ್ಲಿ ಹೊಂಬುಜದ ಅಧಿದೇವಿ ಪದ್ಮಾವತಿ ಅಮ್ಮನವರ ಬಸದಿಯನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ. ಪದ್ಮಾವತಿ ಅಮ್ಮನವರ ಬಸದಿಯ ಹಿಂದಿನ ಲಕ್ಕಿಗಿಡದ ಒತ್ತುಗಟ್ಟೆಯ ಗೋಡೆಯಲ್ಲಿದ್ದ ಈ ಶಾಸನಗಂಭದ ಒಂದೇ ಮುಖದ ಶಾಸನವು ಇದುವರೆಗೂ ಗೋಚರಿಸುತ್ತಿತ್ತು. ಈಗ ಈ ಶಾಸನವನ್ನು ಗೋಡೆಯಿಂದ ಹೊರ ತೆಗೆದಾಗ ನಾಲ್ಕೂ ಬದಿಯಲ್ಲಿ ಶಾಸನವಿರುವುದು ಕಂಡುಬಂದಿದೆ.
ಹರಿಹರದ ಸಂಶೋಧಕರಾದ ಡಾ. ರವಿಕುಮಾರ ಕೆ. ನವಲಗುಂದ ರವರು ಈ ಶಾಸನದ ಕುರಿತು ವಿಸ್ತೃತ ಸಂಶೋಧನೆಯನ್ನು ಕೈಗೊಂಡಿದ್ದಾರೆ.
”ಶಾಸನಗಂಭದ ಪಶ್ಚಿಮ, ದಕ್ಷಿಣ ಹಾಗೂ ಪೂರ್ವ ಮುಖಗಳ ಪಾಠವು ಈಗಾಗಲೆ ಎಪಿಗ್ರಫಿಯ ಕರ್ನಾಟಿಕ ಸಂಪುಟ-೮ ರಲ್ಲಿ ಪ್ರಕಟವಾಗಿದೆ. ಸಧ್ಯ ಉತ್ತರ ಮುಖದ ಶಾಸನವು ಅಪ್ರಕಟಿತವಾಗಿದ್ದು ಕಂದುಕಕ್ರೀಡೆಯ ಮಹತ್ವದ ವಿವರವನ್ನು ಒಳಗೊಂಡಿದೆ. ಈ ಕಂದುಕ ಕ್ರೀಡೆಯನ್ನೆ ಇಂದು ಪೋಲೋ ಆಟವೆಂದು ಕರೆಯುತ್ತಾರೆ”, ಎಂದು ಡಾ. ರವಿಕುಮಾರರವರು ತಿಳಿಸಿದ್ದಾರೆ.
ಶಾಸನದ ಸಾರಾಂಶ
ಕ್ರಿ.ಶ ೧೦೬೦ ರಲ್ಲಿ ರಚಿತವಾದ ಈ ಶಾಸನವು ಹೊಂಬುಜದ ಅರಸು ಮನೆತನ ಸಾಂತರರಿಗೆ ಸಂಬಂಧಿಸಿದ್ದಾಗಿದೆ. ಈ ಮೊದಲೆ ದೊರೆತ ಶಾಸನಗಂಭದ ಮೂರು ಮುಖದ ಶಾಸನದಲ್ಲಿ ಸಾಂತರ ಅರಸನಾದ ತ್ರೈಳೋಕ್ಯಮಲ್ಲ ಎರಡನೆಯ ವೀರಸಾನ್ತರನ ಗುಣಾವಳಿಗಳನ್ನು, ಸಾಂತರ ಇತಿಹಾಸವನ್ನು, ಪದ್ಮಾವತಿದೇವಿ ಹೊಂಬುಜದಲ್ಲಿ ನೆಲೆಸಿದ ಅಪರೂಪದ ಮಾಹಿತಿಯನ್ನು ಸವಿವರವಾಗಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ದೊರೆತ ಶಾಸನಗಂಭದ ಉತ್ತರ ಮುಖದ ಶಾಸನವು ವೀರಸಾನ್ತರನ(ಕ್ರಿ.ಶ ೧೦೫೯-೬೯) ಕಂದುಕ ಕ್ರೀಡೆ ಆಡುವ ಬಗೆಯನ್ನು ವೈಭವೀಕರಿಸಲಾಗಿದೆ. ಅದರ ಸಾರವನ್ನು ಈ ಕೆಳಗಿನಂತೆ ಗ್ರಹಿಸಬಹುದು.
ವೀರಸಾನ್ತರನು ತುದಿಗಾಲಿನಲ್ಲಿಯೇ ಕಂದುಕ ಕ್ರೀಡೆಯಾಡುವುದಲ್ಲಿ ಪ್ರವೀಣನನಾಗಿದ್ದನು. ಡೋಲು ಹಾಗೂ ಢಕ್ಕೆಯ ತಾಳಕ್ಕೆ ತಕ್ಕನಹಾಗೆ ಚುರುಕುತನದಿಂದ ಆಟವಾಡುವ ಸಾನ್ತರನು ತನ್ನ ಕಾಲಬೆರಳ ತುದಿಯಲ್ಲಿಯೇ ನೆಲದಲ್ಲಿ ಚಿತ್ರಬಿಡಿಸುವ ಚತುರನಾಗಿದ್ದನು. ಈ ರೀತಿಯ ಕಂದುಕ ಕ್ರೀಡಾ ಕೌಶಲ್ಯ ಹೊಂದಿದ ಸಾನ್ತರನು ಚೆಂಡನ್ನು ಗುರಿ ತಲುಪಿಸುವ ಎಲ್ಲ ತಂತ್ರಗಳನ್ನು ಬಲ್ಲವನಾಗಿದ್ದರಿಂದ ಅಂತಾಗಿ ಅವನಿಗೆ ಕಂದುಕಬ್ರಹ್ಮ ಎಂಬ ಅಭಿಧಾನ ಪ್ರಾಪ್ತಿಯಾಯಿತು. ಕಂದುಕಬ್ರಹ್ಮನೆಂದು ಖ್ಯಾತಿವೆತ್ತ ವೀರಸಾನ್ತರನು ಕನ್ದುಕದ ಕೋಲಿನ ಕೀರ್ತಿಯನ್ನು ಮೆರೆಯುತ್ತಿದ್ದನು ಎಂದು ಕಂದುಕ ಕ್ರೀಡಾ ಪ್ರಾವೀಣ್ಯನಾದ ವೀರಸಾನ್ತರನನ್ನು ಹೊಗಳಲಾಗಿದೆ.
ಮತ್ತೆ ಮುಂದುವರೆದ ಶಾಸನವು ವೀರಸಾನ್ತರನ ದಾನಗುಣ ಹಾಗೂ ಪರಾಕ್ರಮವನ್ನು ಕೊಂಡಾಡಿದೆ. ವೀರಸಾನ್ತರನು ೨೨ ವರ್ಷ ಪೂರೈಸಿದ ತನ್ನ ಸೈನ್ಯಕ್ಕೆ ಒಂದು ಕೊಳಗ ಭೂಮಿಯನ್ನು ನೀಡಿದ. ವೀರಸಾನ್ತರ ಕಂದುಕಬ್ರಹ್ಮ ಅಷ್ಟೆ ಅಲ್ಲ ಯುದ್ಧನಿಪುಣನೂ ಆಗಿದ್ದನು.
ಇವನು ತುಳುವರ ಸೈನ್ಯದೊಂದಿಗೆ ಕಾದಾಡಿ ಕಂದಯ್ಯ ಹಾಗೂ ಪಾರಿಯಣ್ಣರನ್ನು ಓಡಿಸಿದ. ಮಾಚಿದೇವನನ್ನು , ಕಾಮದೇವನನ್ನು, ಎರಗನನ್ನು ಓಡಿಸಿದ. ಆಳ್ವಖೆೆÃಡದ ಸೈನ್ಯವನ್ನು ಓಡಿಸಿದ. ಗುಪ್ತನ ತಲೆಯನ್ನು ಕಡಿದ. ಪೆರ್ಸೆಯ ಕೋಟೆಯನ್ನು ಗೆದ್ದ. ಆಯ್ಚವರ್ಮನ ನಾನಾ ದೇಶವನ್ನು, ಬನವಾಸಿಯ ಕೋಟೆಯನ್ನು ಗೆದ್ದ. ಈ ಶೌರ್ಯದಿಂದ ವೀರಸಾನ್ತರನು ”ಪರಚಕ್ರಗಂಡ” ಎಂಬ ಬಿರುದನ್ನು ಪಡೆದುಕೊಂಡನು. ಹೀಗಿರಲು ತನಗೆ ೩೩ ವರ್ಷ ತುಂಬಲಾಗಿ ತುಲಾಭಾರವನ್ನು ಮಾಡಿಸಿಕೊಂಡು ಕೋಟಿವರ್ಷ ರಾಜ್ಯಭಾರ ಮಾಡಿದ ಎಂಬ ವಿಷಯ ಶಾಸನದಲ್ಲಿ ದಾಖಲಿಸಲಾಗಿದೆ.
ಕಂದುಕ/ಕನ್ದುಕ ಕ್ರೀಡೆ
ಕಂದುಕ ಎಂದರೆ ಚೆಂಡು, ಗಿರಗಿ ಎಂದರ್ಥ. ಕ್ರೀಡೆ ಎಂದರೆ ಆಟ ಎಂದಾಗುತ್ತದೆ. ಒಟ್ಟಾಗಿ ಕಂದುಕ ಕ್ರೀಡೆ ಎಂದರೆ ಚೆಂಡಾಟ ಎನ್ನಬಹುದು. ಚೆಂಡಾಟದ ಬಗೆಗಳು ನಾನಾ ರೀತಿಗಳಿದ್ದು, ಪ್ರಸ್ತುತ ಕಂದುಕ ಕ್ರೀಡೆ ಎಂದರೆ ಕುದುರೆಯ ಮೇಲೆ ಕೂತು ಉದ್ದ ಕೋಲಿನಿಂದ ಸಣ್ಣ ಚೆಂಡನ್ನು ಹೊಡೆಯುತ್ತ ಗುರಿ ಮುಟ್ಟಿಸುವುದಾಗಿದೆ. ಇದೊಂದು ಗುಂಪು ಆಟ. ಪರ ಹಾಗೂ ಎದುರಾಳಿಗಳ ತಂಡಗಳು ಆಟದಲ್ಲಿ ಭಾಗವಹಿಸುತ್ತವೆ. ಈ ಆಟವನ್ನೆ ಇಂದು ಪೋಲೋ ಎನ್ನುತ್ತಾರೆ. ಪೋಲೋವನ್ನು ನಾವು ಇಂದು ವಿದೇಶಿ ಆಟವೆಂದೇ ತಿಳಿದಿದ್ದೇವೆ ಆದರೆ ಈ ಆಟವನ್ನು ಸಾವಿರ ವರ್ಷಗಳ ಹಿಂದೆಯೇ ನಮ್ಮ ಕನ್ನಡ ರಾಜರು ಆಡುತ್ತಿದ್ದರು ಎಂದು ಗೊತ್ತಾಗುತ್ತದೆ. ಇದೊಂದು ರಾಜಕ್ರೀಡೆಯಾಗಿ ಕಂಡುಬರುತ್ತದೆ.
ಕನ್ದುಕ ಕ್ರೀಡೆ ಎಂದರೆ ಪೋಲೋ ಅಟವೆ ಎಂದು ಸ್ಪಷ್ಟವಾಗಿ ಹೇಳುವುದಕ್ಕೆ ದೊರೆತ ಮಹತ್ವದ ಆಧಾರ ವೀರಸಾನ್ತರನ ಶಿಲ್ಪ ಸಾಕ್ಷಿಯಾಗಿ ನಿಲ್ಲುತ್ತದೆ. ಶಿಲ್ಪದಲ್ಲಿ ಕ್ರೀಡಾ ಪೋಷಾಕಿನಲ್ಲಿ ಕುದುರೆ ಮೇಲೆ ಕುಳಿತ ವೀರಸಾನ್ತರನು ಎಡಗೈಯಲ್ಲಿ ಲಗಾಮು ಹಿಡಿದು ಕ್ರೀಡಾಂಗಣದಲ್ಲಿ ಕಂದುಕದಾಟದಲ್ಲಿ ತಲ್ಲೀನನನಾಗಿದ್ದಾನೆ.. ಹಾಗೆಯೇ ಮುಮ್ಮುಖದ ಬಲಗೈಲ್ಲಿ ಕನ್ದುಕ ಕೋಲನ್ನು(ಪೋಲೋ ಸ್ಟಿಕ್) ಎತ್ತಿ ಹಿಡಿದಿದ್ದಾನೆ. ಈ ಕೋಲಿನ ತುದಿಯಲ್ಲಿ ಚೆಂಡು ಇರುವುದನ್ನು ಕಾಣಬಹುದು.
ಕರ್ನಾಟಕದಲ್ಲಿ ಕಂದುಕಕ್ರೀಡೆ ಕರ್ನಾಟಕದಲ್ಲಿ ಕನ್ದುಕ ಕ್ರೀಡೆಯ ಮೊದಲ ಉಲ್ಲೇಖ ದೊರೆಯುವುದು ಆದಿಕವಿ ಪಂಪನ ವಿಕ್ರಮಾರ್ಜುನವಿಜಯದಲ್ಲಿ(ಕ್ರಿ.ಶ ೯೪೨) ಪಾಂಡವರನ್ನು ರಾಜ್ಯಹೀನರನ್ನಾಗುವ ಮೊದಲು ದುರ್ಯೋಧನ ಪಾಂಡವರ ಜೊತೆ ಕಂದುಕ ಕ್ರೀಡೆ ಆಡಿದ್ದಾಗಿ ಉಲ್ಲೇಖಿಸಲಾಗಿದೆ. ಆಟದ ಬಗೆಯನ್ನಿಲ್ಲಿ ಕೊಡಲಾಗಿಲ್ಲ.
ಈ ಆಟದ ಶಾಸನ ಮೊದಲ ಉಲ್ಲೇಖ ದೊರೆಯುವುದು ಸವದತ್ತಿಯ ಶಾಸನದಲ್ಲಿ(ಕ್ರಿ.ಶ ೯೮೦). ಸವದತ್ತಿಯ ರಟ್ಟರ ರಾಜ ಶಾಂತಿವರ್ಮರಸನ ಮಗನಾದ ಪಿಟ್ಟುಗ ಕನ್ದುಕ ಕ್ರೀಡೆಯನ್ನಾಡುತ್ತಿದ್ದ ಎಂದು ಉಲ್ಲೇಖಿಸಲಾಗಿದೆ. ಇವನಿಗೆ ಕಂದುಕಾದಿತ್ಯ ಎಂಬ ಬಿರುದಿತ್ತು. ಪಿಟ್ಟುಗನ ನಂತರ ಕನ್ದುಕ ಕ್ರೀಡೆಯನ್ನಾಡುವ ವಿಸ್ತೃತ ವಿವರಣೆ ದೊರೆಯುವುದು ಶ್ರವಣಬೆಳಗೊಳದಲ್ಲಿರುವ ರಾಷ್ಟçಕೂಟರ ನಾಲ್ಕನೆಯ ಇಂದ್ರನ ಶಾಸನದಲ್ಲಿ( ಕ್ರಿ.ಶ ೯೮೨).
ಶಾಸನದಲ್ಲಿ ಇಂದ್ರನನ್ನು ಕನ್ದುಕದಾಗಮದೊಳೆ ನೆಗೞ್ಗುಮಲ್ತೆ ಬೀರರ ಬೀರಂ ಎಂದು ಹೊಗಳಲಾಗಿದೆ. ಅಷ್ಟೆ ಅಲ್ಲದೆ ಇಂದ್ರನು ಕನ್ದುಕ ಆಡುವ ಸುದೀರ್ಘವಾದ ವಿವರಣೆಯನ್ನು ನೀಡಲಾಗಿದೆ. ಈ ಕ್ರೀಡೆಯ ಬಗ್ಗೆ ಸವಿವರ ಸಿಗುವುದು ಇಂದ್ರನ ಶಾಸನದಲ್ಲಿಯೆ. ಮಂಡಲಮಾಲೆ, ತ್ರಿಮಂಡಳ ಮಾಲೆ, ತ್ರಿಮಂಡಲ, ಯಾಮಕಮಂಡಳ, ಅರ್ಧಚಂದ್ರ, ಸರ್ವತೋಭದ್ರ, ಉದ್ದವಳ, ಚಕ್ರವ್ಯೂಹ ಇತ್ಯಾದಿ ಕನ್ದುಕ ಕ್ರೀಡೆಯ ಬಂಧಗಳಲ್ಲಿ ಇಂದ್ರನು ಜಯಸಾಧಿಸಿದ್ದಾಗಿ ಶಾಸನದಲ್ಲಿ ದಾಖಲಾಗಿದೆ.
ಚಾಳುಕ್ಯ ಸತ್ಯಾಶ್ರಯ ಇಱಿವಬೆಡಂಗನನ್ನು ಕನ್ದುಕಾಚಾರ್ಯ್ಯ ಎಂದು ಮೋರಿಗೆರೆ ಶಾಸನದಲ್ಲಿ ಕರೆಯಲಾಗಿದೆ(ಕ್ರಿ.ಶ ೧೦೪೫). ಅತ್ತಿಮಬ್ಬೆಯ ಗಂಡ ನಾಗದೇವನಿಗೆ ಕಂದುಕಪುರಂದರ ಎಂಬ ಬಿರುದಿತ್ತು.
ಚಾಳುಕ್ಯ ಒಂದನೆಯ ಸೋಮೇಶ್ವರನ ಮಹಾಸಾಮನ್ತನಾದ ಮಾಧವಾರ ಅರಸನಿಗೆ ಕನ್ದುಕಕನ್ದರ್ಪ್ಪ ಎಂಬ ಅಭಿದಾನವಿತ್ತು(ಕ್ರಿ.ಶ ೧೦೫೪). ಹಾಗೆಯೆ ಹೊಯ್ಸಳ ವೀರ ನರಸಿಂಹನ ದಂಡಾಧಿಪ ಲಕ್ಷ್ಮೀಧರನಿಗೆ ಕಂದುಕನೀರ ಎಂಬ ಬಿರುದಿತ್ತು(ಕ್ರಿಶ ೧೧೪೮). ಕ್ರಿ.ಶ ೧೧೮೯ ರಲ್ಲಿ ರಚಿತವಾದ ಅಗ್ಗಳ ಕವಿಯ ‘ಚಂದ್ರಪ್ರಭ ಪುರಾಣ’ದಲ್ಲಿ ‘ಕಂದುಕಕ್ರೀಡೆ’ಯ ಉಲ್ಲೇಖವಿದೆ. ಬೇಲೂರು, ಸೊರಬ ಶಾಸನಗಳಲ್ಲೂ ಕನ್ದುಕ ಕ್ರೀಡೆಯ ಬಗ್ಗೆ ಉಲ್ಲೇಖವಿದೆ. ಹೀಗೆ ಕನ್ನಡದ ಸಾಕಷ್ಟು ಶಾಸನಗಳಲ್ಲಿ ಈ ಕಂದುಕ ಆಟದ ಪ್ರಸ್ತಾಪವನ್ನು ಕಾಣಬಹುದು. ಇಲ್ಲಿ ಬರುವ ಕಂದುಕ ಆದಿತ್ಯ, ಕಂದುಕ ಬೀರ, ಕಂದುಕಾಚಾರ್ಯ್ಯ, ಕಂದುಕಪುರಂದರ, ಕನ್ದುಕ ಕನ್ದರ್ಪ, ಕಂದುಕನೀರ ಎಂಬ ಅಭಿದಾನಗಳು ಕಂದುಕದಾಟದಲ್ಲಿ ಪ್ರವೀಣ್ಯತೆಯನ್ನು ಪಡೆದುದಕ್ಕಾಗಿ ಲಭ್ಯವಾದ ಪಟ್ಟಗಳು. ಈ ಎಲ್ಲಾ ಪಟ್ಟಗಳಿಗೆ ಮಿಗಿಲಾದುದು ಕನ್ದುಕಬ್ರಹ್ಮ. ಅದು ವೀರಸಾನ್ತರನಿಗೆ ಲಭ್ಯವಾಗಿತ್ತು.
ಪ್ರಪಂಚದಲ್ಲಿ ಹಾಗೂ ಕರ್ನಾಟಕದಲ್ಲಿ ಕಂದುಕ ಕ್ರೀಡೆ ಆಡುವ ಶಾಸನದ ಉಲ್ಲೇಖಗಳು ಈ ಹಿಂದೆ ದೊರೆತರೂ ಶಿಲ್ಪ ಸಹಿತವಾಗಿಲ್ಲ. ವಿಶ್ವದಲ್ಲಿ ಹಾಗೂ ಭಾರತದಲ್ಲಿ ಕೆಲವುಕಡೆ ಈ ಆಟ ಆಡುವ ತೈಲಚಿತ್ರಗಳು, ಟರ್ರಕೋಟಾದ ಬೊಂಬೆಗಳು ದೊರೆತರೂ ವಿವರಣೆ ಅಲ್ಲಿಲ್ಲ. ಸಧ್ಯ ಕಂದುಕ ಕ್ರೀಡೆಯ ವಿವರಣೆಯೊಂದಿಗೆ ಆ ಆಟವನ್ನಾಡುವ ಶಿಲ್ಪವನ್ನೂ ಕೊಟ್ಟ ಶ್ರೇಯಸ್ಸು ಹೊಂಬುಜದ ತ್ರೆöÊಲೋಕ್ಯಮಲ್ಲ ಎರಡನೆಯ ವೀರಸಾನ್ತರನ ಶಾಸನಕ್ಕೆ ದೊರೆಯುತ್ತದೆ. ಆದ್ದರಿಂದ ಪ್ರಸ್ತುತ ಶಿಲ್ಪವು ಶಾಸನ ಸಹಿತ ವಿಶ್ವದ ಮೊದಲ ಕಂದುಕ ಕ್ರೀಡೆ(ಪೋಲೋ) ಆಡುವ ಶಿಲ್ಪ ಎನ್ನಲಡ್ಡಿಯಿಲ್ಲ.
ಈ ಶಾಸನ ಮಾಹಿತಿಯನ್ನು ಹಾಗೂ ಅಧ್ಯಯನ ಮಾಡಲಿಕ್ಕೆ ಅನುವು ಮಾಡಿಕೊಟ್ಟ ಹೊಂಬುಜದ ಸ್ವಸ್ತಿ ಶ್ರೀ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರಿಗೆ ಹೃದಯಪೂರ್ವಕ ಧನ್ಯವಾದಗಳು. ಈ ಹಿಂದೆ ಕಂದುಕ್ರೀಡೆಯ ಅಧ್ಯಯನ ಮಾಡಿದ ಆಚಾರ್ಯ್ಯ ನಾಡೋಜ ಹಂಪನಾ ಅವರಿಗೆ ಅನಂತ ಧನ್ಯವಾದಗಳು. ಶಾಸನದ ಪಾಠವನ್ನು ಪರಿಶೀಲಿಸಿ ವಿವರಣೆ ಒದಗಿಸಿದ ಸದಾ ಬಲ-ಬೆಂಬಲವಾಗಿರುವ ಪಿಎಚ್.ಡಿ ಮಾರ್ಗದರ್ಶಿಗಳು, ವಿದ್ಯಾಗುರುಗಳಾದ ಡಾ.ಡಿ.ವಿ ಪರಮಶಿವಮೂರ್ತಿಯವರಿಗೆ ಮನದಾಳದ ಕೃತಜ್ಞೆತೆಗಳನ್ನು ರವಿಕುಮಾರ ರವರು ತಿಳಿಸಿದ್ದಾರೆ. ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಡಾ.ನಾಗರಾಜ ನವಲಗುಂದ ಹಾಗೂ ಸಂಜಯ ದೇಶಪಾಂಡೆ, ಶ್ರೀಮನ್ಮಥ ಮತ್ತು ಹೊಂಬುಜದ ಜೈನಮಠಕ್ಕೆ ಅನಂತಾನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.
– ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ
ಮಹತ್ವಪೂರ್ಣ ಸಂಶೋಧನೆ. ಕನ್ನಡಿಗರು, ವಿಶೇಷವಾಗಿ ಜೈನರು ಹೆಮ್ಮೆ ಪಡುವಂಥ ಕಾರ್ಯ. ಅಭಿನಂದನೆಗಳು.
Comments are closed.