ಬೆಂಗಳೂರು, ಜನವರಿ ೨೭, ೨೦೧೭: ಜೈನ ಸಮುದಾಯದವರು ಮಹಾಕವಿ ರತ್ನಾಕರವರ್ಣಿಯ ಮೂರ್ತಿಯನ್ನು ಪೂಜೆ ಮಾಡುವ ಬದಲು ಆತನ ಕೃತಿ ಪೂಜಿಸಬೇಕು ಎಂದು ಮೂಡ ಬಿದಿರೆಯ ಜೈನಮಠದ ಭಟ್ಟಾರಕ ಚಾರುಕೀರ್ತಿಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ನಗರದ ಬಸವನಗುಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟ ಸಂಸ್ಥೆ ಹಮ್ಮಿಕೊಂಡಿದ್ದ 31ನೇ ವಾರ್ಷಿ ಕೋತ್ಸವದಲ್ಲಿ ಪ್ರಸಿದ್ಧ ಜೈನ ಸಾಹಿತಿ ಎಸ್. ವಿಮಲಾ ಸುಮತಿ ಕುಮಾರ್ ಅವರಿಗೆ ‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಪರಿಸರದಲ್ಲಿ ಹುಟ್ಟಿ ಬೆಳೆದ ಕಾರಣಕ್ಕೆ ಕವಿ ರತ್ನಾಕರವರ್ಣಿಗೆ ‘ಭರತೇಶ ವೈಭವ’ ಎಂಬ ಅದ್ಭುತ ಕೃತಿ ರಚಿಸಲು ಸಾಧ್ಯವಾಯಿತು. ಒಬ್ಬ ವ್ಯಕ್ತಿಯ ಗುಣ ಹೇಗಿರಬೇಕು? ಎಂಬುದ ಬಗ್ಗೆ ತಿಳಿಯಬೇಕಾದರೆ ಈ ಕೃತಿ ಓದಬೇಕು. ಸೈದ್ಧಾಂತಿಕವಾಗಿ ಅಧ್ಯಯನ ಮಾಡಿದ ಈ ಕವಿ ಹಠವಾದಿ ಹಾಗೂ ನಿಷ್ಠುರವಾದಿಯಾಗಿದ್ದು, ಕೇವಲ ಕರ್ನಾಟಕಕ್ಕಲ್ಲದೆ ವಿಶ್ವಮಟ್ಟದ ವ್ಯಕ್ತಿ ಯಾಗಿದ್ದಾರೆ. ಮಾನ-ಅಪಮಾನ ಸಹಿಸಿಕೊಂಡು ಒಡೆದ ಸಮಾಜವನ್ನು ಒಂದುಗೂಡಿಸುವ ರೀತಿ ಕೃತಿ ರಚಿಸಿದ ಅಪರೂಪದ ಕವಿ ರತ್ನಾಕರವರ್ಣಿ ಎಂದು ಶ್ಲಾಘಿಸಿದರು.
ಧರ್ಮಸ್ಥಳದ ಸುರೇಂದ್ರ ಕುಮಾರ್ ಮಾತನಾಡಿ, ಒಂದು ಧರ್ಮ ಉಳಿಯಬೇಕಾದರೆ ಅದರ ಆಚಾರ- ವಿಚಾರಗಳನ್ನು ಪ್ರಚಾರ ಮಾಡಬೇಕು ಎಂದರು. ನಾಡೋಜ ಸಾಹಿತಿ ಹಂಪನಾ ಮಾತನಾಡಿ, ವಿಮಲಾ ಸುಮಿತಿ ಕುಮಾರ್ ಅವರು ರತ್ನಾಕರ ವರ್ಣಿಯ ಉಪಾಸನಕ್ಕಾಗಿಯೇ ತಮ್ಮ ಜೀವನ ಮುಡುಪಾಗಿಟ್ಟರು. ಪಂಪ, ರನ್ನ ಮತ್ತು ಕುಮಾರವ್ಯಾಸ ಅನಂತರ ರತ್ನಾಕರ ವರ್ಣಿ ಮಹಾಕವಿಯಾಗಿದ್ದಾರೆ. ವಿಶ್ವ ಮಟ್ಟದಲ್ಲಿ ಈ ಕವಿಯನ್ನು ಗುರುತಿಸಿ ದವರು ಕುವೆಂಪು. ಭರತೇಶವೈಭವ ಕೃತಿಯಲ್ಲಿ ಈ ಕವಿಯ ಸೃಜನಶೀಲತೆ ಕಾಣಬಹುದು ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾ ವತಿ ಹೆಗ್ಗಡೆ, ಎಸ್.ವಿಮಲಾ ಸುಮತಿ ಕುಮಾರ್, ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟದ ಕಾರ್ಯಾಧ್ಯಕ್ಷ ಕೆ.ಬಿ.ಯುವರಾಜ ಬಲ್ಲಾಳ್, ಅನಿತಾ ಸುರೇಂದ್ರ ಕುಮಾರ್ ಹಾಜರಿದ್ದರು. – ಕೃಪೆ: ಉದಯವಾಣಿ