- ೧೨ನೇ ಶತಮಾನಕ್ಕೆ ಸೇರಿದ ಶಾಸನ
- ಆದಿನಾಥ ತೀರ್ಥಂಕರರ ಪಾದ ಪೀಠದಲ್ಲಿ ಪತ್ತೆಯಾದ ಶಾಸನ
- ಕರ್ನಾಟಕದ ದಾವಣಗೆರೆ ಜಿಲ್ಲೆಯ ಬೇತೂರು ಗ್ರಾಮದಲ್ಲಿ ಪತ್ತೆಯಾದ ಶಾಸನ
- ಶಿವಮೊಗ್ಗದ ಡಾ. ಆರ್.ಶೇಜೇಶ್ವರ ನಾಯಕ್ ಹಾಗೂ ಹರಿಹರದ ಡಾ.ರವಿಕುಮಾರ್ ಕೆ. ನವಲಗುಂದ ರವರ ಸಂಶೋಧನೆ
ದಾವಣಗೆರೆ, ೩೦ ಡಿಸೆಂಬರ್, ೨೦೨೧: ದಾವಣಗೆರೆ ತಾಲ್ಲೂಕು ಬೇತೂರು ಗ್ರಾಮದಲ್ಲಿ ಹೊಸ ಜೈನ ಶಾಸನ ಪತ್ತೆಯಾಗಿದೆ. ಡಾ. ಆರ್. ಶೇಜೇಶ್ವರ., ಸಹಾಯಕ ನಿರ್ದೇಶಕರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಶಿವಪ್ಪನಾಯಕ ಅರಮನೆ ಶಿವಮೊಗ್ಗ., ಹಾಗೂ ಉಪನಿರ್ದೇಶಕರು(ಪ್ರಭಾರ) ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಧಾರವಾಡ ಇವರು ಮತ್ತು ಡಾ. ರವಿಕುಮಾರ ಕೆ ನವಲಗುಂದ., ಶಾಸನ ಸಂಶೋಧಕ, ಕನ್ನಡ ಉಪನ್ಯಾಸಕ ಸರ್ಕಾರಿ ಪದವಿಪೂರ್ವ ಕಾಲೇಜು ಬನ್ನಿಕೋಡು ಇವರುಗಳು ಜಂಟೀಯಾಗಿ ಕ್ಷೇತ್ರಕಾರ್ಯಕ್ಕಾಗಿ ಬೇತೂರಿಗೆ ಹೋಗಿದ್ದಾಗ ಊರಿನ ಕಲ್ಲೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ತಂದು ಇಟ್ಟಿರುವ ಜಿನಬಿಂಬದಲ್ಲಿ ಶಾಸನವಿರುವುದನ್ನು ಶೋಧಿಸಿದ್ದಾರೆ.
ಬೇತೂರು ಗ್ರಾಮದ ಬಸವೇಶ್ವರ ದೇವಾಲಯದ ಪಕ್ಕಕ್ಕೆ ಇರುವ ೧೨ ನೆಯ ಶತಮಾನಕ್ಕೆ ಸಂಬಂಧಿಸಿದ ಮೂರು ಜಿನಬಿಂಬಗಳನ್ನು ಮತ್ತು ಒಂದು ಅಂಬಿಕಾ ಯಕ್ಷಿಯ ಪ್ರತಿಮೆಯನ್ನು ಇತ್ತೀಚೆಗೆ ಇದೆ ಗ್ರಾಮದ ಕಲ್ಲೇಶ್ವರ ದೇವಾಲಯದಲ್ಲಿ ತಂದು ಇಡಲಾಗಿತ್ತು. ನಾವುಗಳು ಎಲ್ಲ ಪ್ರತಿಮೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಜಿನಬಿಂಬದಲ್ಲಿ ಶಾಸನವಿರುವುದು ಕಂಡುಬಂತು.
ಪ್ರಸ್ತುತ ಶಾಸನ ಸಹಿತ ಜಿನಬಿಂಬವು ೩೧ ಇಂಚು ಅಗಲ, ೩೯ ಇಂಚು ಉದ್ದ ಇದ್ದು, ಕರಿಕಲ್ಲಿನಲ್ಲಿ ಕೆತ್ತನೆಯಾಗಿದೆ. ಕಮಲ ಹೂವ್ವಿನ ಮೇಲೆ ಕುಳಿತ, ಪದ್ಮಾಸನಯುಕ್ತ ಈ ಮೂರ್ತಿಯ ತಲೆಗೂದಲುಗಳು ಭುಜದ ಮೇಲೆ ಇಳಿಬಿದ್ದಿರುವುದರಿಂದ ಈ ಬಿಂಬವು ಜೈನರ ಪ್ರಥಮ ತೀರ್ಥಂಕರರಾದ ಆದಿನಾಥ(ವೃಷಭನಾಥ)ರದ್ದೆಂದೆ ಹೇಳಬಹುದು. ಜೈನ ಪ್ರತಿಮಾ ಲಕ್ಷಣಗಳಲ್ಲಿ ಬಹುತೇಕವಾಗಿ ತೀರ್ಥಂಕರರಾದ ಆದಿನಾಥರಿಗೆ ಮತ್ತು ಕೇವಲಿಯಾದ ಬಾಹುಬಲಿಗೆ ಮಾತ್ರ ತಲೆಗೂದಲುಗಳನ್ನು ಭುಜದವರೆಗೆ ಇಳಿಬಿಡಲಾಗಿರುತ್ತದೆ. ಸಧ್ಯ ಮೇಲೆ ಉಲ್ಲೇಖಿಸಲಾದ ಆದಿನಾಥರ ಜಿನಬಿಂಬದ ಪಾದಪೀಠದಲ್ಲಿ ಒಂದೇ ಸಾಲಿನ ಶಾಸನವಿದ್ದು “ಮಲ್ಲಿಷೇಣ ಮಲಧಾರಿ ದೇವರ ಶಿಷ್ಯನಾದ ಬಲದೇವಸೆಟ್ಟಿ ಎಂಬುವನು ಈ ಪ್ರತಿಮೆಯನ್ನು ಮಾಡಿಸಿದ” ಎಂಬುದನ್ನು ತಿಳಿಸುತ್ತದೆ. ಲಿಪಿ ಆಧಾರದ ಮೇಲೆ ಈ ಶಾಸನವು ೧೨ ನೆಯ ಶತಮಾನದ ರಚನೆಯಾಗಿದೆ.
ಚತುರ್ಮುಖ ಬಸದಿ:
ಬಲದೇವ ಸೆಟ್ಟಿ ಮಾಡಿಸಿದ ಆದಿನಾಥ ತೀರ್ಥಂಕರ ಬಿಂಬದಂತೆ ಮತ್ತೆರಡು ಅದೇ ಆದಿನಾಥರ ಜಿನಬಿಂಬಗಳು ಕಲ್ಲೇಶ್ವರ ದೇವಾಲಯದಲ್ಲಿವೆ. ಇವು ಪ್ರಮಾಣದಲ್ಲಿ ಒಂದೇ ಅಳತೆಯವುಗಳಾಗಿದ್ದು ಬಹುಶಃ ಬಲವದೇವ ಸೆಟ್ಟಿಯೇ ಇವುಗಳನ್ನು ನಿರ್ಮಿಸಿರಬಹುದು. ಸಧ್ಯ ಮೂರು ಆದಿನಾಥರ ಜಿನಬಿಂಬಗಳು ಇಲ್ಲಿದ್ದು ಇನ್ನೊಂದು ದೊರೆತಿಲ್ಲ. ಈ ಆಧಾರದ ಮೇಲೆ ಬೇತೂರಲ್ಲಿ ಒಂದು ಚತುರ್ಮುಖ (ನಾಲ್ಮೊಗ) ಬಸದಿ ಇದ್ದಿತ್ತು ಎಂದೇ ಹೇಳಬಹುದು. ಜೈನಧರ್ಮದ ಚತುರಾನನತ್ವ ಅತಿಶಯದ ಆಧಾರದಡಿಯಲ್ಲಿ ಒಂದೇ ತೀರ್ಥಂಕರ ಮೂರ್ತಿಗಳನ್ನು ನಾಲ್ಕು ದಿಕ್ಕಿಗೆ ಒಂದೊಂದರಂತೆ ಮುಖಮಾಡಿ ಪ್ರತಿಷ್ಟಾಪಿಸಿ ಚತುರ್ಮುಖ ಬಸದಿಯನ್ನು ಕಟ್ಟಿರುತ್ತಾರೆ. ತೀರ್ಥಂಕರರಿಗೆ ಕೇವಲಜ್ಞಾನವಾಗಿ ಸಮವಸರಣದಲ್ಲಿ ವಿರಾಜಮಾನವಾದಾಗ ನಾಲ್ಕೂ ದಿಕ್ಕಿನೆಡೆ ಅವರ ಮುಖದರ್ಶನವಾಗುತ್ತದೆ. ಈ ಆಧಾರದಡಿಯಲ್ಲಿ ನಾಲ್ಮೊಗದ ಬಸದಿಗಳು ನಿರ್ಮಾಣವಾಗಿರುತ್ತವೆ. ಇದೇ ಲಕ್ಷಣ ಇರುವ ಬಸದಿ ಬೇತೂರಲ್ಲಿದ್ದು, ಈಗ ಅದು ನಾಶವಾಗಿ ಮೂರ್ತಿಗಳು ಮಾತ್ರ ಉಳಿದುಕೊಂಡಿವೆ.
ಮಲ್ಲಿಷೇಣ ಮಲಧಾರಿದೇವ :
ಪ್ರಸ್ತುತ ಬಲದೇವ ಸೆಟ್ಟಿಯು ಮಲ್ಲಿಷೇಣ ಮಲಧಾರಿದೇವ ಜಿನಮುನಿಯ ಶಿಷ್ಯನಾಗಿದ್ದು, ವ್ಯಾಪಾರಸ್ಥನಾದ ಇವನು ಮಲ್ಲಿಷೇಣರ ಅಣತಿಯಂತೆ ಜಿನಬಿಂಬವನ್ನು ಮಾಡಿಸಿದ್ದಾನೆ. ಉಲ್ಲೇಖಿಸಿದ ಮುನಿಯ ಹೆಸರು ಮಲ್ಲಿಷೇಣ ಎಂಬುದಾಗಿದ್ದರೆ ಮಲಧಾರಿ ಎಂಬುದು ವಿಶೇಷಣವಾಗಿದೆ. ಶ್ರವಣಬೆಳಗೊಳ ಮತ್ತು ಹಾವೇರಿ ಜಿಲ್ಲೆಯ ಗುತ್ತಲ ಇತ್ಯಾದಿ ಶಾಸನಗಳಲ್ಲಿ ಈ ಮುನಿಗಳ ಹೆಸರು ಉಲ್ಲೇಖಿಸಲ್ಪಟ್ಟಿದೆ. ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಮಲ್ಲಿಷೇಣರು ಸಂಚಾರ ನಿಮಿತ್ತವಾಗಿ ಬೇತೂರಿಗೂ ಬಂದಿದ್ದು ಈ ಶಾಸನದಲ್ಲಿ ತಿಳಿದುಬರುತ್ತದೆ. ಇವರು ಬದುಕಿದ್ದ ಕಾಲದ ಆಧಾರದ ಮೇಲೂ ಶಾಸನ ರಚನೆಯ ಕಾಲ ೧೨ ನೆಯ ಶತಮಾನವೆಂದು ಸ್ಪಷ್ಟವಾಗಿ ಹೇಳಬಹುದು. ಮಲ್ಲಿಷೇಣರು ಒಬ್ಬ ಪ್ರಭಾವಿ ಜಿನಮುನಿ.
ಬೇತೂರು. ಶಾಸನೋಕ್ತ ‘ಬೆಲ್ತೂರು’ ಇಂದಿನ ಬೇತೂರು. ಹನ್ನೆರಡನೆಯ ಶತಮಾನದಲ್ಲೆ ಅಸ್ಥಿತ್ವದಲ್ಲಿದ್ದ ಬೇತೂರು ಪ್ರಾಚೀನ ಆಡಳಿತ ಘಟಕವಾದ ಹನ್ನೆರಡು ಬಾಡದ ಮುಖ್ಯ ಹಾಗೂ ಮೊದಲ ಗ್ರಾಮವಾಗಿತ್ತು. ಇಲ್ಲಿ ಸಾಕಷ್ಟು ವೀರಗಲ್ಲುಗಳು, ಮಹಾಸತಿಕಲ್ಲುಗಳು, ದಾನಶಾಸನಗಳು, ಶಿವಾಲಯಗಳು, ಜಿನಾಲಯಗಳು ಇದ್ದುದಾಗಿ ಕಂಡುಬರುತ್ತದೆ. ಪ್ರಸ್ತುತ ದೊರೆತ ಶಾಸನದ ಆಧಾರದ ಮೇಲೆ ಇಲ್ಲಿ ಒಂದು ಚತುರ್ಮುಖ ಬಸದಿಯೂ ಇದ್ದುದಾಗಿ ಕಂಡುಬರುತ್ತದೆ. ಈ ಜಿನಾಲಯದ ನಂತರ ದಂಡನಾಯಕ ಕೂಚಿರಾಜ ಎಂಬುವನು ತನ್ನ ಹೆಂಡತಿಯಾದ ಲಕ್ಷ್ಮಿಯ ಹೆಸರಲ್ಲಿ ಪಾರ್ಶ್ವನಾಥ ತೀರ್ಥಂಕರಯುಕ್ತ ‘ಲಕ್ಷ್ಮಿ ಜಿನಾಲಯ’ವೊಂದನ್ನು ಕಟ್ಟಿಸುತ್ತಾನೆ. ಈ ಆಧಾರದ ಮೇಲೆ ಬೇತೂರು ಶೈವರ ಮತ್ತು ಜೈನರ ಬಾಹುಳ್ಯವಿರುವ ಕೇಂದ್ರವಾಗಿತ್ತು ಎಂದು ಹೇಳಬಹುದು. ಪ್ರಸ್ತುತ ಇಲ್ಲಿ ಜೈನರಾರೂ ಇಲ್ಲ. ಜೈನಸ್ಮಾರಕಗಳಿವೆ.
ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಕನ್ನಡ ಉಪನ್ಯಾಸಕರಾದ ಡಾ. ನಾಗರಾಜ ಕೆ ನವಲಗುಂದ ಹಾಗೂ ಕಲ್ಲೇಶ್ವರ ದೇಗುಲದ ಸೇವಕರಾದ ಶ್ರೀ ಶಿವಕುಮಾರ ಇವರಿಗೆ ಧನ್ಯವಾದಗಳು.
– ಜೈನ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ