ಹೊಂಬುಜ (ಶಿವಮೊಗ್ಗ ಜಿಲ್ಲೆ), ೭ ಜುಲೈ ೨೦೧೯: ಜೈನಧರ್ಮದ ನೆಲೆವೀಡು, ಸಾಂತರರ ನಾಡು, ಮಹಾಮಾತೆ ಪದ್ಮಾವತಿ ದೇವಿಯು ನೆಲೆಸಿರುವ ತಾಣ ಜೈನರು, ವಿದ್ವಾಂಸರು ಹಾಗೂ ಇತಿಹಾಸ ತಜ್ಞರಿಂದ ವಿಶ್ವದಾದ್ಯಂತ ತನ್ನದೇ ಆದ ವಿಶಷ್ಟ ಸ್ಥಾನವನ್ನು ಹೊಂದಿರುವ ವಿಶಿಷ್ಟ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ಹೊಂಬುಜ/ಹುಂಚ. ಕೇಂದ್ರ ಸರ್ಕಾರದ ಪುರಾತತ್ತ್ವ ಇಲಾಖೆಯ ಆಡಳಿತಕ್ಕೊಳ ಪಟ್ಟಿರುವ ಇಲ್ಲಿನ ಪುರಾತನವಾದ ಪಂಚಕೂಟ ಬಸದಿ/ ಪಂಚ ಬಸದಿಯ ದುಸ್ಥಿಯನ್ನು ಕಂಡು ಕ್ಷೇತ್ರವನ್ನು ಆಗಾಗ್ಗೆ ಸಂದರ್ಶಿಸುವ ಹಲವಾರು ಸಂಶೋಧಕರು/ ಸಂದರ್ಶಕರು/ ಭಕ್ತರು ಇಲಾಖೆಯವರು ಈ ಬಸದಿಯ ಪುನಶ್ಚೇತನದೆಡೆಗೆ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.
”7ನೆಯ ಶತಮಾನದಿಂದ ಆರಂಭವಾಗುವ ಈ ಕ್ಷೇತ್ರದ ಇತಹಾಸ ಅತಿ ವಿಶಷ್ಟವಾದುದು. ಕಾಲಕಾಲಕ್ಕೆ ಸಾಂತರರು ಇಲ್ಲಿ ಹಲವು ಬಸದಿಗಳನ್ನು ನಿರ್ಮಿಸುತ್ತಾ ಬಂದರು. ಅವುಗಳಲ್ಲಿ ಪ್ರಮುಖವಾದುದು ಚಟ್ಟಲದೇವಿಯಿಂದ ಕ್ರಿ.ಶ. ೧೦೭೭ರಲ್ಲಿ ನಿರ್ಮಿಸಲಾದ ಸುಮಾರು ೧೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇಲ್ಲಿನ ಪಂಚಕೂಟ ಬಸದಿ. ಸಾಮಾನ್ಯವಾಗಿ ಬಸದಿ/ದೇವಸ್ಥಾನಗಳಲ್ಲಿ ಒಂದು ಗರ್ಭಗುಡಿ ಇದ್ದರೆ ಇಲ್ಲಿ ಐದು ಗರ್ಭಗುಡಿಗಳಿವೆ. ಅಲ್ಲದೆ ಇಲ್ಲಿ ಹಲವು ಶಾಸನಗಳನ್ನು ನಾವು ಕಾಣಬಹುದು. ಇತಿಹಾಸ ಹಾಗೂ ವಾಸ್ತುಶಿಲ್ಪದ ದೃಷ್ಟಿಯಿಂದ ನಾಡಿನ ಅಮೂಲ್ಯ ಆಸ್ತಿ ಈ ಪಂಚಕೂಟ ಬಸದಿ. ಈ ಐತಿಹಾಸಿಕ ವಿಶಿಷ್ಟ ಬಸದಿಯು ಪ್ರಸ್ತುತ ಕೇಂದ್ರ ಪುರಾತತ್ತ್ವ ಇಲಾಖೆಯ ಅವಜ್ಞೆಗೆ ಒಳಗಾಗಿರುವುದು ಖೇದಕರ” ಎಂದು ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ ಯುವ ಜೈನ ಸಂಶೋಧಕ ಜೈನ್ಹೆರಿಟೇಜ್ಸೆಂಟರ್ಸ್.ಕಾಂನ (www.jainheritagecentres.com) ನಿತಿನ್ ಹೆಚ್.ಪಿ.ಅವರು ತಿಳಿಸಿದ್ದಾರೆ.
”ವರ್ಷಕ್ಕೊಂದೆರೆಡು ಬಾರಿಯಾದರು ಸಂದರ್ಶಿಸುವ ನಾವು ಇಲ್ಲಿನ ಪಂಚಕೂಟ ಬಸದಿಯ ಸ್ಥಿತಿಯನ್ನು ನೋಡಿ ಮರುಗುವಂತಾಗುತ್ತದೆ. ಈ ಬಸದಿಯೊಳಗೆ ಮಳೆಗಾಲದಲ್ಲಿ ನಾವು ಕಾಲಿಡಲಾಗುವುದಿಲ್ಲ. ಬಸದಿಯ ಮಾಳಿಗೆಯು ಅಲ್ಲಲ್ಲಿ ಸೋರುತ್ತಿರುವುದರಿಂದ ಮಳೆಗಾಲದಲ್ಲಿ ಸದಾಕಾಲ ಮಳೆ ನೀರು ನಿಂತಿರುತ್ತದೆ. ಬಸದಿ ಹಲವೆಡೆ ಪಾಚಿ ಕಟ್ಟಿರುವುದರಿಂದ ಯಾರಾದರು ಕಾಲು ಜಾರಿ ಬೀಳುವುದು ಶತಃಸಿದ್ಧ. ಈ ಬಸದಿಯ ಜೀರ್ಣೋದ್ಧಾರ ಹಾಗೂ ಪುನಶ್ಚೇತನದೆಡೆಗೆ ಸಂಬಂಧ ಪಟ್ಟ ಇಲಾಖೆಯವರು ಗಮನಹರಿಸಬೇಕು” ಎಂದು ಹುಬ್ಬಳ್ಳಿಯ ಉದ್ಯಮಿ ಮಹಾವೀರ ಕುಂದೂರ್ ರವರು ತಿಳಿಸಿದ್ದಾರೆ.
”ಇವರ ಅವಜ್ಞೆಗೆ ಮತ್ತೊಂದು ಉದಾಹರಣೆ ಎಂದರೆ ಪಂಚ ಬಸದಿಯ ಒಳಗೆ ಚಪ್ಪಲಿಯನ್ನು ಹಾಕಿಕೊಂಡು ಹೊಗುವ ಕೆಲವು ಪುಂಡರು. ಒಂದು ಧಾರ್ಮಿಕ ಕೇಂದ್ರ/ಪೂಜಾ ಕೇಂದ್ರದೊಳಗೆ ಚಪ್ಪಲಿಯನ್ನು ಜನರು ಹಾಕಿಕೊಂಡು ಹೋಗುತ್ತಾರೆಂದರೆ ಅಲ್ಲಿನ ಅವ್ಯವಸ್ಥೆ ಯಾವ ಮಟ್ಟದಲ್ಲಿರಬಹುದೆಂದು ಊಹಿಸಿ” ಎನ್ನುತ್ತಾರೆ ದಾವಣಗೆರೆಯ ಯುವ ಜೈನ ಕಾರ್ಯಕರ್ತ ಎಂ.ಆರ್.ಅಭಿನಂದನ್.
-ಜೈನ್ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವೀಸ್