Skip to content
Home » ಕನ್ನಡ » ಸುದ್ದಿ-ಸಮಾಚಾರ » ದಿಗಂಬರ ಜೈನ ಆಚಾರ್ಯ ೧೦೮ ಶ್ರೀ ವಿದ್ಯಾಸಾಗರರ ಸಮಾಧಿ

ದಿಗಂಬರ ಜೈನ ಆಚಾರ್ಯ ೧೦೮ ಶ್ರೀ ವಿದ್ಯಾಸಾಗರರ ಸಮಾಧಿ

    ಡೋಂಗರಗಡ (ಚತ್ತೀಸಗಢ, ಭಾರತ), ೧೮ ಫೆಬ್ರವರಿ ೨೦೨೩: ದಿಗಂಬರ ಜೈನ ಸಂಪ್ರದಾಯದ ಅತ್ಯಂತ ಗೌರವಾನ್ವಿತ ತಪಸ್ವಿ “ವಿಶ್ವವಾನಂದಿಯ ಗುರುವರ್ – ವಿಶ್ವದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಗುರು” ಎಂದು ಕರೆಯಲ್ಪಡುವ ಆಚಾರ್ಯ ೧೦೮ ಶ್ರೀ ವಿದ್ಯಾಸಾಗರ ಮಹಾರಾಜರು ಚಂದ್ರಗಿರಿ ತೀರ್ಥ ಡೊಂಗರ್‌ಗಢ (ಛತ್ತೀಸ್‌ಗಢ) ದಲ್ಲಿ ಮುಂಜಾನೆ 2:35 ಕ್ಕೆ, ಭಾನುವಾರ 18ನೇ ಫೆಬ್ರವರಿ 2024, ಮಾಘ ಶುಕ್ಲ ಅಷ್ಟಮಿ – ಉತ್ತಮ ಸತ್ಯ ಧರ್ಮದ ದಿನ ಸಮಾಧಿ ಹೊಂದಿದರು.

    ಅವರು ಜೈನ ಗ್ರಂಥಗಳಲ್ಲಿ ಸೂಚಿಸಿದಂತೆ ಸಲ್ಲೇಖನವನ್ನು ಕೈಗೊಂಡಿದ್ದರು. ಇದಕ್ಕೂ ಮೂರು ದಿನಗಳ ಹಿಂದೆ ಅವರು ತಮ್ಮ ಆಚಾರ್ಯ ಸ್ಥಾನಮಾನವನ್ನು ತ್ಯಜಿಸಿದ್ದರು ಮತ್ತು ಪ್ರತ್ಯಾಖ್ಯಾನ ಮತ್ತು ಪ್ರಾಯಶ್ಚಿತ್ತವನ್ನು ನೀಡುವುದನ್ನು ನಿಲ್ಲಿಸಿ ಸಂಪೂರ್ಣ ಮೌನವನ್ನು ವಹಿಸಿದ್ದರು.

    ಫೆಬ್ರವರಿ 6 ರಂದು ಮಧ್ಯಾಹ್ನ ಶೌಚದಿಂದ ಹಿಂದಿರುಗಿದ ನಂತರ ತಮ್ಮೊಂದಿಗಿದ್ದ ತ್ಯಾಗಗಳನ್ನು ಕಳುಹಿಸಿ, ನಿರ್ಯಾಪಕ ಮುನಿ 108 ಶ್ರೀ ಯೋಗಸಾಗರಜಿಯವರೊಂದಿಗೆ ಚರ್ಚಿಸಿ ಸಂಘಕ್ಕೆ ಸಂಬಂಧಿಸಿದ ಕೆಲಸದಿಂದ ನಿವೃತ್ತರಾದರು ಮತ್ತು ಅದೇ ದಿನ ಅವರು ಆಚಾರ್ಯ ಪದವಿಯನ್ನು ತ್ಯಜಿಸಿದ್ದರು. ತಮ್ಮ ಶಿಷ್ಯ ನಿರ್ಯಾಪಕ ಶ್ರಮಣ ಮುನಿ 108 ಶ್ರೀ ಸಮಯಸಾಗರ ಮಹಾರಾಜರನ್ನು ಆಚಾರ್ಯ ಹುದ್ದೆಗೆ ಅರ್ಹರೆಂದು ಪರಿಗಣಿಸಿ ನಂತರ ಅವರಿಗೆ ಆಚಾರ್ಯ ಹುದ್ದೆ ನೀಡಬೇಕು ಎಂದು ಘೋಷಿಸಿದರು, ಇದಕ್ಕೆ ಸಂಬಂಧಿಸಿದ ಔಪಚಾರಿಕ ಮಾಹಿತಿಯನ್ನು ನಾಳೆ ನೀಡಲಾಗುವುದು.
    ಡೋಂಗರಗಡದಲ್ಲಿ ಇಂದು ೧೧ ಘಂಟೆಗೆ ಮೆರವಣಿಗೆಯ ಮೂಲಕ ಅವರು ಅಂತಿಮ ಯಾತ್ರೆ ನಡೆಯಲಿದ್ದು ನಂತರ ಮಧ್ಯಾಹ್ನ ೧ ಕ್ಕೆ ಅವರು ಅಂತಿಮ ಕ್ರಿಯೆಗಳನ್ನು ನಿರ್ವಹಿಸಲಾಗುವುದು.

    ಪೂರ್ವಾಶ್ರಮದ ಜೀವನ – ದೀಕ್ಷೆಯ ಮೊದಲು ಅವರ ಪೂರ್ವಾಶ್ರಮದಲ್ಲಿ ವಿದ್ಯಾಧರ ಎಂದು ಕರೆಯಲ್ಪಡುತ್ತಿದ್ದ ಅವರು 1946 ರ ಅಕ್ಟೋಬರ್ 10 ರಂದು ಶರದ್ ಪೂರ್ಣಿಮಾ ದಿನದಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಜನಿಸಿದರು. ಇವರ ತಂದೆ ತಾಯಿ ಶ್ರೀಮತಿ ಶ್ರೀಮತಿದೇವಿ ಮತ್ತು ಶ್ರೀ ಮಲ್ಲಪ್ಪಾಜಿ.

    ಅವರು 1968 ರಲ್ಲಿ ಅಜ್ಮೀರ್‌ನಲ್ಲಿ ಆಚಾರ್ಯ ಶಾಂತಿಸಾಗರ ಆಚಾರ್ಯ ಪರಂಪರೆಗೆ ಸೇರಿದ ಆಚಾರ್ಯ ಜ್ಞಾನಸಾಗರಜಿಯವರಿಂದ ಮುನಿದೀಕ್ಷೆಯನ್ನು ಪಡೆದರು. 1972ರಲ್ಲಿ ಅವರಿಗೆ ಆಚಾರ್ಯ ಪದವಿ ನೀಡಲಾಯಿತು.

    ಪ್ರಖಾಂಡ ವಿದ್ವಾಂಸರು – ಶಾಸ್ತ್ರೀಯ (ಸಂಸ್ಕೃತ ಮತ್ತು ಪ್ರಾಕೃತ) ಮತ್ತು ಹಲವಾರು ಭಾರತೀಯ ಭಾಷೆಗಳಲ್ಲಿ (ಕನ್ನಡ, ಹಿಂದಿ ಮತ್ತು ಮರಾಠಿ) ಪರಿಣಿತರಾಗಿದ್ದ ಅವರು ಹಿಂದಿ ಮತ್ತು ಸಂಸ್ಕೃತದ ಹಲವು ಕೃತಿಗಳನ್ನು ರಚಿಸಿದ್ದರು. ಹಲವಾರು ಸಂಶೋಧಕರು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳಿಗಾಗಿ ಅವರ ಕೃತಿಗಳನ್ನು ಅಧ್ಯಯನ ಮಾಡಿದ್ದಾರೆ.

    ಕೃತಿಗಳು – ಅವರ ಕೆಲವು ಕೃತಿಗಳು:

    • ಸಂಸ್ಕೃತ ಪಠ್ಯಗಳು: ನಿರಂಜನ ಶತಕ, ಭಾವನಾ ಶತಕ, ಪರಿಷಹ ಜಯ ಶತಕ, ಸುನೀತಿ ಶತಕ ಮತ್ತು ಶ್ರಮಣ ಶತಕ.
    • ಹಿಂದಿ ಮಹಾಕಾವ್ಯ: ಮೂಕಾ ಮಾಟಿ, ಭಾರತೀಯ ಜ್ಞಾನಪೀಠದಿಂದ ಪ್ರಕಟವಾಗಿದೆ.
    • ಪದ್ಯಾನುವಾದಗಳು: ಯೋಗಸಾರ, ಇಷ್ಟೋಪದೇಶ, ಸಮಯಸರ್ (ಕುಂದಕುಂದ ಕಾ ಕುಂದನ್), ಗೋಮಟೇಶ್ ತುಡಿ ಇತ್ಯಾದಿ.
    • “ಸಮಣ ಸುತ್ತಂ” ಪದ್ಯಗಳ ಅನುವಾದ.

    ಅವರ ಸಮಾಧಿಯು ಜೈನ ಸಮುದಾಯ ಮತ್ತು ದಿಗಂಬರ ಜೈನ ಸಮಾಜದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ.
    ಅಗಲಿದ ಆತ್ಮಕ್ಕೆ ನಮ್ಮ ನಮೋಸ್ತು, ನಮೋಸ್ತು, ನಮೋಸ್ತುಗಳು.

    – ಜೈನ್ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವಿಸ್, ನಿತಿನ್ ಹೆಚ್.ಪಿ. ಪ್ರತಿಷ್ಟಾಚಾರ್ಯ ವಿನಯ್ ಭೈಯ್ಯ “ಸಾಮ್ರಾಟ್” ಮತ್ತು Vidyasagar.guru ರವರ ಮಾಹಿತಿಯೊಂದಿಗೆ

    error: Jain Heritage Centres - Celebrating Jain Heritage.....Globally!