18 ವರ್ಷಗಳ ಹಿಂದೆ (26 ಮೇ 2002) ಜೈನ ಪರಂಪರೆ, ಇತಿಹಾಸ, ದೇವಾಲಯ, ಬಸದಿಗಳು, ವಾರ್ತಾಸೇವೆ ಹಾಗೂ ಜೈನಧರ್ಮಕ್ಕೆ ಸಂಬಂಧಿಸಿದ ಇನ್ನಿತರ ಮಾಹಿತಿಯನ್ನು ಒದಗಿಸುವ ಅಂತರ್ಜಾಲ ತಾಣವಾಗಿ ಆರಂಭವಾದ ನಮ್ಮ www.jainheritagecentres.com ತಾಣವು ಇಂದು ಜೈನಧರ್ಮಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಮಾಹಿತಿಗಾಗಿ ಬಹುಮುಖ್ಯ ತಾಣವಾಗಿ ನೋಡಲ್ಪಟ್ಟಿದೆ.
ನಮ್ಮ ಹದಿನೆಂಟು ವರ್ಷಗಳ ಪಯಣವನ್ನೊಮ್ಮೆ ಹಿಂದಿರುಗಿ ನೋಡಿದರೆ ನಾವು ಜೈನಧರ್ಮಕ್ಕೆ ಸಂಬಂಧಿಸಿದಂತೆ ಕೈಗೊಂಡ ಹಲವಾರು ಯೋಜನೆಗಳು ಕಣ್ಮುಂದೆ ಬರುತ್ತವೆ. ಯೋಜನೆಗಳ ರೂಪ-ಸ್ವರೂಪಗಳು, ಪ್ರಮಾಣವು ಚಿಕ್ಕದಿರಬಹುದು ಅಥವಾ ದೊಡ್ಡದಿರಬಹುದು ಈ ಎಲ್ಲದರ ಮೂಲ ಉದ್ದೇಶ ಜೈನಧರ್ಮ, ತತ್ತ್ವ, ಪರಂಪರೆ ಹಾಗೂ ಜೈನಕ್ಷೇತ್ರಗಳ ಪ್ರಸಾರ ಪ್ರಚಾರ ಮತ್ತು ಸಂರಕ್ಷಣೆ.
ಈ ನಿಟ್ಟಿನಲ್ಲಿ ನಾವು ಕೈಗೊಂಡ ಕೆಲವು ಯೋಜನೆಗಳ ಅವಲೋಕನ ಆತ್ಮಾವಲೋಕನ ಅತ್ಯವಶ್ಯ. ನಮ್ಮ ಕಾರ್ಯಗಳ ಆತ್ಮಾವಲೋಕನ, ಆತ್ಮವಿಮರ್ಶೆ ಮಾಡಿಕೊಂಡಾಗಲೇ ನಾವು ಮುನ್ನಡೆಯಲು ಸಾಧ್ಯ.
ಈ ನಿಟ್ಟಿನಲ್ಲಿ ನಾವು ಕೈಗೊಂಡ ಹಲವಾರು ಯೋಜನೆಗಳ ಸ್ಥೂಲ ಪರಿಚಯ ಇಲ್ಲಿದೆ.
- ಹೋರಾಟಗಳು – ಕೆಲವು ಸಂದರ್ಭಗಳಲ್ಲಿ ಜೈನ ಸಮಾಜ ಹಾಗೂ ಧರ್ಮದ ಅಳಿವು ಉಳಿವಿನ ಪ್ರಶ್ನೆ ಎದುರಾದಾಗ ನಾವು ಒಂದು ತಂಡವಾಗಿ ಕಾರ್ಯನಿರ್ವಹಿಸಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದೇವೆ. ಉದಾಹರಣೆಗೆ – 2004 ರಲ್ಲಿ ತಮಿಳುನಾಡಿನಲ್ಲಿ ಜೈನ ಮುನಿಗಳ ಮೇಲಿನ ದಾಳಿ, 2013ರಲ್ಲಿ ಗಿರಿನಾರ್ ನಲ್ಲಿ ಜೈನ ಮುನಿಗಳ ಮೇಲೆ ನಡೆದ ದಾಳಿ, 2016ರಲ್ಲಿ ಸಲ್ಲೇಖನ ವ್ರತದ ಆಚರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ವತಿಯಿಂದ ಸ್ಟೇ ಆರ್ಡರ್ (stay order) ತರುವಲ್ಲಿ ಪ್ರಮುಖ ಪಾತ್ರ ವಹಿಸಿದುದು.
- ಜೈನಧರ್ಮದ ಪ್ರಥಮಗಳು – ನಮ್ಮ ಅಂತರ್ಜಾಲ ತಾಣದ ಮುಖಾಂತರ ಕೈಗೊಂಡ ಕೆಲವು ಯೋಜನೆಗಳು ಡಿಜಿಟಲ್ ಮಾಧ್ಯಮದಲ್ಲಿ ಜೈನಧರ್ಮದ ಪ್ರಥಮಗಳ ಸಾಲಿಗೆ ಸೇರಿದುದು ಉಲ್ಲೇಖನೀಯ.
- ಕೆಲವು ಯೋಜನೆಗಳು ಆಯಾ ಸಂದರ್ಭಕ್ಕೆ ಅನುಸಾರವಾಗಿ ಸಮಾಜದ ಪ್ರಮುಖರ, ಗುರುಗಳ, ಭಟ್ಟಾರಕರ ಸೂಚನೆ, ಸಂಘಸಂಸ್ಥೆಗಳ ಕೋರಿಕೆಯಿಂದಾಗಿ ನಾವು ಸ್ವತಂತ್ರರಾಗಿ ಇನ್ನೂ ಹಲವು ಬಾರಿ ಒಟ್ಟುಗೂಡಿ ಕೈಗೊಂಡವುಗಳು.
- ಜೈನಕ್ಷೇತ್ರಗಳ ಸಂರಕ್ಷಣೆ – ನಮ್ಮ ಅಂತರ್ಜಾಲ ತಾಣದ ಮೂಲೋದ್ದೇಶವಾದ ಜೈನಕ್ಷೇತ್ರಗಳ ಸಂರಕ್ಷಣೆಗೆ ಒತ್ತುಕೊಟ್ಟು ಹಲವಾರು ಕ್ಷೇತ್ರಗಳ ಮಾಹಿತಿಯನ್ನು ಹೊರ ತೆಗೆದು ಅದರಲ್ಲಿ ಕೆಲವು ಕ್ಷೇತ್ರಗಳು ಸಂರಕ್ಷಣೆ ಗೋಳಪಡುವಂತೆ ಕಾರಣೀಭೂತ ವಾಗಿದ್ದೇವೆ.
- ಸಂಶೋಧನೆ – ಜೈನ ಇತಿಹಾಸ, ಪರಂಪರೆ ಹಾಗೂ ಶಾಸನಗಳ ಸಂಶೋಧನೆಗೆ ವಿಶೇಷ ಒತ್ತು ನೀಡಿ ಈ ನಿಟ್ಟಿನಲ್ಲಿ ಸಕ್ರಿಯರಾಗಿದ್ದೇವೆ. ಜೈನ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಹಲವಾರು ಸಮಾನ ಮನಸ್ಕರೊಂದಿಗೆ ಕೈಜೊಡಿಸಿ ಅವರುಗಳ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದೇವೆ.
- ಅಪ್ರಕಟಿತ ಶಾಸನಗಳ ಪ್ರಕಟಣೆ – ಹಲವು ಬಾರಿ ಹತ್ತು ಹಲವು ಅಪ್ರಕಟಿತ ಜೈನ ಶಾಸನಗಳ ಮೊದಲ ಪ್ರಕಟಣೆಯು ನಮ್ಮ ಅಂತರ್ಜಾಲತಾಣದಲ್ಲಿ ಪ್ರಕಟವಾದದ್ದು ನಮಗೆ ಹೆಮ್ಮೆಯ ವಿಷಯ.
- ವಿಶ್ವವಿದ್ಯಾಲಯಗಳಿಂದ ಮಾನ್ಯತೆ – ನಮ್ಮಲ್ಲಿ ಪ್ರಕಟವಾದ ಕೆಲವು ಸಂಶೋಧನಾತ್ಮಕ ಲೇಖನಗಳು ಹಾಗೂ ಶಾಸನಗಳ ಪ್ರಕಟಣೆಯನ್ನು ಕೆಲವು ವಿಶ್ವವಿದ್ಯಾಲಯಗಳು ಮಾನ್ಯ ಮಾಡಿದುದು ಮಹತ್ವದ ಮೈಲಿಗಲ್ಲುಗಳಲ್ಲೊಂದು.
- ವಿದೇಶಿ ಸಂಸ್ಥೆಗಳು, ವ್ಯಕ್ತಿಗಳೊಂದಿಗಿನ ಯೋಜನೆ – ನಮ್ಮ ಅಂತರ್ಜಾಲ ತಾಣವು ವಿದ್ಯುನ್ಮಾನ ಮಾಧ್ಯಮವನ್ನು ಉಪಯೋಗಿಸಿ ಕೈಗೊಳ್ಳುತ್ತಿರುವ ಕಾರ್ಯವಾದ್ದರಿಂದ ದೇಶ ವಿದೇಶಗಳ ಹಲವಾರು ಜನ ವಿದೇಶಿ ವಿದ್ವಾಂಸರು ಹಾಗೂ ವಿದೇಶಿ ಸಂಸ್ಥೆಗಳ ಸತತ ಸಂಪರ್ಕದಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದೇವೆ. ಅವುಗಳಲ್ಲಿ ಪ್ರಮುಖವಾದವೆಂದರೆ ಸ್ಲೊವೇಕಿಯ ಭಾಷೆಯಲ್ಲಿ ಪ್ರಕಟವಾದ ಜೈನಧರ್ಮದ ಮೊಟ್ಟ ಮೊದಲ ಪುಸ್ತಕಕ್ಕೆ ಚಿತ್ರಗಳನ್ನು ಒದಗಿಸಿರುವುದು, ಕೊರಿಯನ್ ಭಾಷೆಯಲ್ಲಿ ನಿರ್ಮಾಣವಾದ ಜೈನ ಧರ್ಮಕ್ಕೆ ಸಂಬಂಧಿಸಿದ ಮೊಟ್ಟ ಮೊದಲ ಸಾಕ್ಷ್ಯಚಿತ್ರ ಹೊರಬರಲು ಕಾರಣೀಭೂತವಾಗಿ ಸಕ್ರಿಯವಾಗಿ ಪಾಲ್ಗೊಂಡಿದುದು, ಹಲವಾರು ವಿದೇಶಿ ವಿದ್ಯಾರ್ಥಿಗಳ ಜೈನಧರ್ಮದ ಸಂಶೋಧನೆಯಲ್ಲಿ ನೇರವಾದುದು.
- ಜೈನ ಕ್ಷೇತ್ರಗಳ ಅಂತರ್ಜಾಲತಾಣದ ಅಭಿವೃದ್ಧಿ – ಕಾಲಕಾಲಕ್ಕೆ ಹಲವಾರು ಮಠಗಳಿಂದ, ಭಟ್ಟಾರಕ ಸ್ವಾಮೀಜಿಗಳವರಿಂದ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಅಂತರ್ಜಾಲ ತಾಣವನ್ನು ಅಭಿವೃದ್ಧಿ ಪಡಿಸಲು ಸೂಚನೆಗಳು ಬಂದಾಗ ಹಲವಾರು ಅಂತರ್ಜಾಲ ತಾಣಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇವೆಲ್ಲಕ್ಕೂ ಕಲಶಪ್ರಾಯವೆಂಬಂತೆ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ಅಂತರ್ಜಾಲ ತಾಣವು 2005ರಿಂದ ನಿರಂತರವಾಗಿ, ಅಲ್ಲದೆ ಶ್ರೀ ಕ್ಷೇತ್ರ ಹೊಂಬುಜದ ಅಂತರ್ಜಾಲ ತಾಣವು 2013ರಿಂದ ನಡೆದುಕೊಂಡು ಬರುತ್ತಿದೆ.
2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ “ಜೈನ ಪರಂಪರೆ ಮತ್ತು ಪುರಾತತ್ತ್ವ ಪ್ರದರ್ಶನ”ವು ನಮ್ಮ ಎಲ್ಲ ಯೋಜನೆಗಳಲ್ಲಿ ಮುಕುಟಪ್ರಾಯವಾದದ್ದು.
ಈ ಮೇಲ್ಕಾಣಿಸಿದ ಅಂಶಗಳು ನಾವು ಕಳೆದ ಹದಿನೆಂಟು ವರ್ಷಗಳಲ್ಲಿ ಕೈಗೊಂಡ ಹಲವಾರು ಕಾರ್ಯಗಳ ಸ್ಥೂಲ ಪರಿಚಯ. ಬಹುಶಃ ನಾವು ಕೈಗೊಂಡ ಪ್ರತಿಯೊಂದು ಯೋಜನೆಗಳ ವಿಸ್ತೃತ ವರದಿಯನ್ನು ಬರೆಯಲು ಹೊರಟಲ್ಲಿ ಅದೇ ಒಂದು ಪುಸ್ತಕ ರೂಪ ತಾಳುವುದರಲ್ಲಿ ಸಂಶಯವಿಲ್ಲ.
ಎಲ್ಲಕ್ಕಿಂತ ಮಿಗಿಲಾಗಿ ನಾವು ಹಲವೆಡೆ ಕ್ಷೇತ್ರ ಕಾರ್ಯಕ್ಕೋಸ್ಕರ ತೆರಳಿದಾಗ ನಮಗರಿವಿಲ್ಲದೆಯೇ ನಮ್ಮ ಕಾರ್ಯವನ್ನು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ತಿಳಿದಿರುವ ಜನರು ನಮ್ಮನ್ನು ತಮ್ಮ ಮನೆಯವರಲ್ಲೊಬ್ಬರಂತೆ ಆದರ ಆತಿಥ್ಯದಿಂದ ಉಪಚರಿಸಿ ನಮ್ಮ ಕಾರ್ಯಕ್ಕೆ ಸಹಕರಿಸಿದ್ದಾರೆ. ಅವರ ಪ್ರೀತ್ಯಾಧಾರಗಳಿಗೆ ಬೆಲೆ ಕಟ್ಟಲಾದೀತೇ? ವಿಶ್ವದಾದ್ಯಂತ ಹಾಗೂ ಭಾರತದಾದ್ಯಂತ ಹರಡಿರುವ ಹಲವಾರು ಸಂಶೋಧಕರ, ವಿದ್ವಾಂಸರ, ಜೈನಧರ್ಮಾಸಕ್ತರ, ಕಾರ್ಯಕರ್ತರ ಪರಿಚಯವಾಗಿ ಅವರಲ್ಲಿ ಹಲವರು ನಮ್ಮ ಆಪ್ತಸ್ನೇಹಿತರಾಗಿ ಪರಿವರ್ತಿತರಾಗಿದ್ದಾರೆ.
ನಮ್ಮ ಈ ಹದಿನೆಂಟು ವರ್ಷಗಳ ಪಯಣದಲ್ಲಿ ನೂರಾರು ಜನರ ಕೊಡುಗೆ, ಸಹಕಾರ, ಮಾರ್ಗದರ್ಶನವಿದೆ. ನಮ್ಮ ಈ ಪಯಣದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಎಲ್ಲ ಹಿತೈಷಿಗಳು, ಸ್ನೇಹಿತರು, ವಿದ್ವಾಂಸರು, ಜೈನ ಧರ್ಮಾಸಕ್ತರು, ಕಾರ್ಯಕರ್ತರು ಹಾಗೂ ಕುಟುಂಬದವರ ಸಹಕಾರವಿದೆ.
ನಮ್ಮ ಈ ಪಯಣದಲ್ಲಿ ಕೈಜೋಡಿಸಿ, ಸಹಕರಿಸಿ, ಮಾರ್ಗದರ್ಶನ ನೀಡಿದ ತಮ್ಮೆಲ್ಲರಿಗೂ ಅನಂತಾನಂತ ವಂದನೆಗಳು.
ಮುಂದಿನ ದಿನಗಳಲ್ಲೂ ತಮ್ಮೆಲ್ಲರ ಪ್ರೀತಿಯ ಅಂತರ್ಜಾಲ ತಾಣವಾದ ಜೈನ್‍ಹೆರಿಟೇಜ್‍ಸೆಂಟರ್ಸ್.ಕಾಂ ಅನ್ನು ಹೀಗೆಯೇ ಮುನ್ನಡೆಸಿಕೊಂಡು ಹೋಗಬೇಕಾಗಿ ಕೋರಿಕೆ….
ವಂದನೆಗಳೊಂದಿಗೆ,
ನಿತಿನ್ ಹೆಚ್.ಪಿ.
ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು
ಜೈನ್‍ಹೆರಿಟೇಜ್‍ಸೆಂಟರ್ಸ್.ಕಾಂ
26 ಮೇ 2020