- ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆಯ ಶ್ರೀ ಶಾಂತಿನಾಥ ಬಸದಿಯಲ್ಲಿ ಪತ್ತೆಯಾದ ಶಾಸನಗಳು
- 15-16 ಹಾಗೂ 19ನೇ ಶತಮಾನಕ್ಕೆ ಸೇರಿದ ಶಾಸನಗಳು
- ಚವ್ವೀಸ(ಇಪ್ಪತ್ತನಾಲ್ಕು) ತೀರ್ಥಂಕರರ ಪಾದಪೀಠ ಹಾಗೂ ‘ಶ್ರುತ ಸ್ಕಂದ’ದ ಫಲಕದ ಪೀಠದಲ್ಲಿ ಪತ್ತೆಯಾದ ಶಾಸನ
- ಪಿಹೆಚ್.ಡಿ. ಸಂಶೋಧನಾ ವಿದ್ಯಾರ್ಥಿ ಕಳಸದ ಕು. ಸುಪ್ರೀತ ಕೆ.ಎನ್.ರವರ ಕ್ಷೇತ್ರಕಾರ್ಯದ ಸಮಯದಲ್ಲಿ ದೊರೆತ ಶಾಸನಗಳು
ಕಳಸ (ಚಿಕ್ಕಮಗಳೂರು ಜಿಲ್ಲೆ), 18 ಸೆಪ್ಟೆಂಬರ್, 2019: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆಯ ಶ್ರೀ ಶಾಂತಿನಾಥ ಬಸದಿಯಲ್ಲಿ ಎರಡು ಜೈನ ಶಾಸನಗಳು ಪತ್ತೆಯಾಗಿವೆ. ಇವೆರಡೂ ಪಾದ ಪೀಠ ಶಾಸನಗಳಾಗಿದ್ದು, ಬೇರೆ-ಬೇರೆ ಕಾಲಮಾನವುಗಳಾಗಿವೆ ಎಂದು ಲಿಪಿ ಸ್ವರೂಪ ಮತ್ತು ಉಲ್ಲೇಖಿತ ಶಕ ವರ್ಷದ ಆಧಾರದ ಮೇಲೆ ಗುರುತಿಸಬಹುದು.
ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪಿಹೆಚ್.ಡಿ. ಅಧ್ಯಯನ ನಡೆಸುತ್ತಿರುವ ಸುಪ್ರೀತ ಕೆ.ಎನ್.ರವರು ಕ್ಷೇತ್ರಕಾರ್ಯ ಕೈಗೊಂಡಾಗ ಈ ಶಾಸನಗಳು ಪತ್ತೆಯಾಗಿವೆ. ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾದಲ್ಲಿ ”ಕಳಸ ಪರಿಸರದ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ” ವಿಷಯದ ಕುರಿತು ಡಾ.ಸಿ.ಮಹದೇವರವರ ಮಾರ್ಗದರ್ಶನದಲ್ಲಿ ಇವರು ಅಧ್ಯಯನ ಕೈಗೊಂಡಿದ್ದಾರೆ.
ಚವ್ವೀಸ ತೀರ್ಥಂಕರರ ಪಾದಪೀಠ ಶಾಸನ – ಮೊದಲ ಶಾಸನವು ಬಸದಿಯಲ್ಲಿರುವ ಚವ್ವೀಸ(ಇಪ್ಪನಾಲ್ಕು) ತೀರ್ಥಂಕರ ಪಾದಪೀಠದಲ್ಲಿದ್ದು, ನಾಲ್ಕೂ ಬದಿಯಲ್ಲಿ ಬರೆಯಲಾಗಿದೆ. ಭುಯನಹಳ್ಳಿಯ ಬೆಳ್ಳಿಸೆಟ್ಟಿಯ ಮಗ ತಿಮ್ಮಿಸೆಟ್ಟಿ ಇವನ ಮಗ ಸಿಂಹಗದ್ದೆಯ (ಇಂದಿನ ನರಸಿಂಹರಾಜಪುರ) ಪದುಮಣ್ಣ ಸೆಟ್ಟಿ. ಈ ಪದುಮಣ್ಣ ಸೆಟ್ಟಿಯು ಚೌವ್ವೀಸ ತೀರ್ಥಂಕರ ಪ್ರತಿಮೆಗೆ ಪಾದಪೀಠವನ್ನು ಮಾಡಿಸಿಕೊಟ್ಟಿದ್ದು, ಈ ಒಟ್ಟು ಶಾಸನದ ಸಾರವಾಗಿದೆ. ಶಾಸನದ ಕೊನೆಯಲ್ಲಿ ಹೊಸಪಟ್ಟಣದ ಮೂಲ ನಾಯಕ ವರ್ಧಮಾನ ತೀಥಂಕರರನ್ನು ನೆನಸಲಾಗಿದೆ. ಶಾಸನದಲ್ಲಿ ಸ್ಷÀಷ್ಟವಾದ ತೇದಿ ಇರದ ಕಾರಣವಾಗಿ ಲಿಪಿ ಸ್ವರೂಪದ ಆಧಾರದ ಮೇಲೆ ಈ ಶಾಸನ ರಚನೆಯ ಕಾಲಮಾನವನ್ನು 15-16 ನೆಯ ಶತಮಾನವೆಂದು ಗುರುತಿಸಬಹುದು.
‘ಶ್ರುತ ಸ್ಕಂದ’ದ ಫಲಕದ ಪೀಠದ ಶಾಸನ – ಇದೇ ಬಸದಿಯಲ್ಲಿ ಹಿತ್ತಾಳೆ ಲೋಹದ ‘ಶ್ರುತ ಸ್ಕಂದ’ದ ಫಲಕ ಪ್ರತಿಮೆವೊಂದಿದ್ದು, ಶಾಸನವನ್ನು ಹೊಂದಿದೆ. ಶಾಸನದಲ್ಲಿ ಉಲ್ಲೇಖಿತವಾದಂತೆ ಈ ಅಕ್ಷರ ಪ್ರತಿಮೆಯನ್ನು ಶಕವರುಷ 1782 ಅಂದರೆ ಕ್ರಿ. ಶ 1860ರಲ್ಲಿ ‘ಸಂಸೆವರ’ ಗ್ರಾಮದ ಹೆಗ್ಗಡೆ ಭಕ್ತಿಯಿಂದ ಮಾಡಿಸಿಕೊಟ್ಟನು. ಈ ‘ಶ್ರುತಸ್ಕಂದ’ ಅಕ್ಷರ ಪ್ರತಿಮೆ ಮಾಡಿದವನು ‘ಕುಮಾಂ’ ಎಂಬುವನಾಗಿದ್ದಾನೆ. ‘ಶ್ರುತಸ್ಕಂದ’ಕ್ಕೆ ಜೈನಧರ್ಮದಲ್ಲಿ ಅತ್ಯಮೂಲ್ಯ ಸ್ಥಾನವಿರುವುದನ್ನು ಗಮನಿಸಬಹುದು. ಶ್ರುತಸ್ಕಂದವನ್ನು ಸರಸ್ವತಿ ಎಂತಲೂ ಕರೆಯುತ್ತಾರೆ. ಶ್ರುತ ವೆಂದರೆ ಜೈನಾಗಮ ಅಥವಾ ಶಾಸ್ತ್ರ ಎಂದಾಗುತ್ತದೆ. ಶ್ರುತಸ್ಕಂದದ ಯಂತ್ರದ ಪೂರ್ತಿ ಜಿನಾಗಮ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಶ್ರುತಸ್ಕಂದದ ಮೇಲೆ ಲೋಕದ ವಿವರ ಮತ್ತು ಶಾಸ್ತ್ರವನ್ನು ಬರೆದಿರುತ್ತಾರೆ. ಈಗಲೂ ಈ ಶ್ರುತಸ್ಕಂದ ಆರಾಧನೆಗಳು ಬಸದಿಗಳಲ್ಲಿ ನಡೆಯುತ್ತದೆ.
“ಕಳಸದ ಚಂದ್ರನಾಥ ಮತ್ತು ಸಂಸೆಯ ಶಾಂತಿನಾಥ ಬಸದಿಗಳು ಶಾಸನದ ಭಂಡಾರವೇ ಎನ್ನುವಂತಿದ್ದು, ಮೊಗೆದಷ್ಟು ನೀರು ಬರುವಂತೆ ನಿತ್ಯ ಹೊಸ ಶಾಸನಗಳು ಬೆಳಕಿಗೆ ಬರುತ್ತಿರುವುದು ಒಂದು ಸಂತಸದ ಸಂಗತಿ. ಈ ಕುರುಹುಗಳಿಂದ ಕಳಸದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಮೂಲಾಧಾರಗಳಾಗಿವೆ”, ಎಂದು ಕು. ಸುಪ್ರೀತ ರವರು ತಿಳಿಸಿದ್ದಾರೆ.
ಶಾಸನದ ಛಾಯಾಚಿತ್ರ ಮಾಡಲು ಅನುವಿತ್ತ ಬಸದಿಯ ಪ್ರಧಾನ ಪಂಡಿತರಾದ ಶ್ರೀ ಸುದರ್ಶನ್ ಶೆಟ್ಟಿ ಮತ್ತು ಅರ್ಚಕರಾದ ನಿತಿನ್ ಕುಮಾರ್ ಎಸ್. ವಿ. ಇವರಿಗೆ ಮತ್ತು ಶಾಸನದ ಪಾಠವನ್ನು ಓದಿಕೊಟ್ಟಂತಹ ಡಾ. ರವಿಕುಮಾರ್ ಕೆ. ನವಲಗುಂದ, ತಮ್ಮ ಮಾರ್ಗದರ್ಶಕರಾದ ಡಾ.ಸಿ.ಮಹದೇವ ಇವರಿಗೆ ಸುಪ್ರೀತರವರು ಧನ್ಯವಾದಗಳು.
– ಜೈನ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವೀಸ್