ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯದಲ್ಲಿ ಭಾರತದ ವಿವಿಧ ಪ್ರದೇಶಗಳ ಸುಮಾರು ೭೦,೦೦೦ ಕ್ಕೂ ಹೆಚ್ಚು ವಿಶಿಷ್ಠ ಅಪರೂಪದ ಕಲಾಕೃತಿಗಳನ್ನೊಳಗೊಂಡಿದೆ. ಇಲ್ಲಿ ಭಾರತದ ವಿವಿಧ ಪ್ರದೇಶಗಳ, ಸಂಸ್ಕೃತಿಗಳ, ಧರ್ಮಗಳ, ವಿಷಯಗಳಿಗೆ ಸಂಬಂಧಿಸಿದ ಕಲಾಕೃತಿಗಳನ್ನು ಕಾಣಬಹುದು. ಅವುಗಳಲ್ಲಿ ಜೈನಧರ್ಮಕ್ಕೆ ಸೇರಿದ ಸುಮಾರು ೨,೦೦೦ ವರ್ಷಗಳಿಗೆ ಸೇರಿದ ವಿವಿಧ ವಿಶಿಷ್ಠ ಕಲಾಕೃತಿಗಳನ್ನು ಕಾಣಬಹುದು.
ಅವುಗಳಲ್ಲಿ ಎಲ್ಲಕ್ಕಿಂತ ಪುರಾತನವಾದದ್ದು ಮೌರ್ಯರ ಕಾಲ(ಕ್ರಿ.ಪೂ. ೧ನೇ ಶತಮಾನ)ಕ್ಕೆ ಸೇರಿದ ಕಾಯೋತ್ಸರ್ಗ ಭಂಗಿಯಲ್ಲಿರುವ ಪಾರ್ಶ್ವನಾಥ ತೀರ್ಥಂಕರರ ವಿಗ್ರಹ. ಇದು ವಿಶ್ಚದ ಅತಿಪುರಾತನ ಪಾರ್ಶ್ವನಾಥ ತೀರ್ಥಂಕರರ ವಿಗ್ರಹಗಳಲ್ಲೊಂದು. ಇದರೊಂದಿಗೆ ಮತ್ತೊಂದು ಪುರಾತನವಾದ ಕಾಯೋತ್ಸರ್ಗ ಭಂಗಿಯಲ್ಲಿರುವ ತೀರ್ಥಂಕರರ ವಿಗ್ರಹವನ್ನು ಕಾಣಬಹುದು.
ಇಲ್ಲಿ ಮತ್ತೊಂದು ಪುರಾತನವಾದ ೮ನೇ ಶತಮಾನಕ್ಕೆ ಸೇರಿದ ಮಹಾರಾಷ್ಟ್ರದ ಖಾಂದೇಶ್ ಪ್ರದೇಶದ, ಚೋಪ್ಡಾ ಊರಿನ ಚವ್ವೀಸ ತೀರ್ಥಂಕರರೊಂದಿಗಿರುವ ವೃಷಭ ತೀರ್ಥಂಕರರ ವಿಗ್ರಹವನ್ನು ಕಾಣಬಹುದು.
ಇಲ್ಲಿರುವ ಚಲುಕ್ಯರ ಕಾಲಕ್ಕೆ ಸೇರಿದ ೯ನೇ ಶತಮಾನ ಕರ್ನಾಟಕದ ಬಾಹುಬಲಿ ಸ್ವಾಮಿಯ ವಿಗ್ರಹ ಅತ್ಯಂತ ಆಕರ್ಷಕವಾಗಿದೆ. ಬಾಹುಬಲಿಯ ವಿಗ್ರಹದ ಹೆಗಲಿನವರೆಗಿರುವ ಕೂದಲು, ಎರಡೂ ತೊಡೆ ಹಾಗೂ ತೋಳುಗಳವರೆಗೆ ಹಬ್ಬಿರುವ ಬಳ್ಳಿಗಳು ವಿಗ್ರಹದ ಸೊಬಗನ್ನ ಮತ್ತಷ್ಟು ಹೆಚ್ಚಿಸಿದೆ. ಇದು ವಿಶ್ವದ ಪ್ರಾಚೀನ ಬಾಹುಬಲಿ ವಿಗ್ರಹಗಳಲ್ಲೊಂದು.
೧೨ ನೇ ಶತಮಾನಕ್ಕೆ ಸೇರಿದ ಕರ್ನಾಟಕದ ಧರಣೇಂದ್ರ ಯಕ್ಷ ಹಾಗೂ ಪದ್ಮಾವತಿ ಯಕ್ಷಿಯರ ವಿಗ್ರಹವನ್ನು ಕಾಣಬಹುದು. ಇವುಗಳೊಂದಿಗೆ ಚಾಮರಧಾರಿಗಳೊಂದಿಗಿರುವ ೧೨ ನೇ ಶತಮಾನಕ್ಕೆ ಸೇರಿದ ಕಾಯೋತ್ಸರ್ಗ ಭಂಗಿಯಲ್ಲಿರುವ ತೀರ್ಥಂಕರರ ವಿಗ್ರಹವನ್ನು ಸಹ ಕಾಣಬಹುದು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಅಂಕೈ ಕೋಟೆಯಲ್ಲಿ ದೊರೆತ ೧೧ನೇ ಶತಮಾನಕ್ಕೆ ಸೇರಿದ ಪದ್ಮಾಸನ ಯುಕ್ತ ತೀರ್ಥಂಕರರ ವಿಗ್ರಹವನ್ನು ಕಾಣಬಹುದು. ತೀರ್ಥಂಕರ ತಲೆಯ ಮೇಲ್ಭಾಗದಲ್ಲಿ ಛತ್ರತ್ರಯ ಹಾಗೂ ಇಕ್ಕೆಲಗಳಲ್ಲಿ ನರ್ತಕಿಯರನ್ನು ಕಾಣಬಹುದು. ಅದೇ ಕೋಟೆಯಲ್ಲಿ ದೊರೆತ ತ್ರಿತೀರ್ಥಂಕರರನ್ನು ಒಳಗೊಂಡಿರುವ ೧೨ನೇ ಶತಮಾನಕ್ಕೆ ಸೇರಿದ ಎರಡು ಕಲ್ಲಿನ ಶಾಸನೊಕ್ತ ವಿಗ್ರಹಗಳನ್ನು ಕಾಣಬಹುದು.
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪೆಯಲ್ಲಿ ದೊರೆತ ಶಕ ವರುಷ ೧೪೮೫- ಕ್ರಿ.ಶ. ೧೫೬೩ಕ್ಕೆ ಸೇರಿದ ಸಾಳ್ವ ರಾಜಮನೆತನದ ಚೆನ್ನಭೈರಾದೇವಿಯ ಕಾಲಕ್ಕೆ ಸೇರಿದ ಶಾಸನವು ಜಿನಮಂದಿರ ನಿರ್ಮಾಣದ ವಿವರವನ್ನೊದಗಿಸುತ್ತದೆ.
ಗಟ್ಟಿಯಾದ ಕಾಗದದ ಮೇಲೆ ಪಾಶ್ವನಾಥ ತೀರ್ಥಂಕರರ ಜನ್ಮದ ವಿವರಗಳನ್ನು ಚಿತ್ರಿಸಿರುವ ಕಲ್ಪಸೋತ್ರದ ಒಂದು ಸಂದರ್ಭದ ಚಿತ್ರಣವು ಪಾಶ್ವನಾಥ ತೀರ್ಥಂಕರರ ಜೀವನದ ಪರಿಚಯ ಮಾಡಿಸುತ್ತದೆ.
ಜೈನಧರ್ಮದ ಲೋಕಾಕಾರದ ವಿವಿಧ ಸ್ವರೂಪವನ್ನು ವಿಸ್ತೃತವಾಗಿ ಚರ್ಚಿಸಿರುವ ಆಚಾರ್ಯ ಶ್ರೀ ಚಂದ್ರರಿಂದ ಕ್ರಿ.ಶ. ೧೬೪೯ ರಚಿತವಾದ “ಸಂಗ್ರಹಾಣಿ ಸೂತ್ರ”ದ “ಭವನಪತಿ”ಗಳ ಅಪರೂಪದ ಚಿತ್ರವನ್ನು ಇಲ್ಲಿ ಕಾಣಬಹುದು.
ಜೈನಧರ್ಮದ ೨೦ನೇ ತೀರ್ಥಂಕರರಾದ ಮುನಿಸುವ್ರತ ತೀರ್ಥಂಕರರ ಕಾಲಕ್ಕೆ ಸೇರಿದ ಚಂದ್ರರಾಜನಿಗೆ ಸಂಬಂಧಿಸಿದ ಕಥೆಯನ್ನು ಒಳಗೊಂಡಿರುವ ಪಂಡಿತ್ ಮೋಹನ್ ವಿಜಯ್ ಜಿ ಯವರಿಂದ ಗುಜರಾತ್ ಮೇವಾರ್ (ಕ್ರಿ.ಶ. ೧೭೫೦-೧೭೭೫) ಶೈಲಿಯಲ್ಲಿ ರಚಿತವಾಗಿರುವ “ಚಂದ್ರ ರಾಜ್ ನೋ ರಾಸ್” ಕೃತಿಯ ಆಕರ್ಷಕವಾದ ವರ್ಣಚಿತ್ರವನ್ನೂ ಸಹ ಇಲ್ಲಿ ಕಾಣಬಹುದು.
ಇದಲ್ಲದೆ ರಾಜಸ್ಥಾನದ ೧೬ನೇ ಶತಮಾನಕ್ಕೆ ಸೇರಿದ ಸುಪಾರ್ಶ್ವನಾಥ ತೀರ್ಥಂಕರರ ವಿಗ್ರಹ, ಸಮವಸರಣ, ಅಷ್ಟಮಂಗಲ, ಹಾಗೂ ತೀರ್ಥಂಕರರ ಮಾತೆಯ ೧೬ ಶುಭ ಸ್ವಪ್ನಗಳನ್ನು ಚಿತ್ರಿಸಿರುವ ಎಂಬ್ರಾಯ್ಡರಿ ಕುಶಲಕಲೆಯ ಕಲಾಕೃತಿಗಳು ಮನಸೂರೆಗೊಳ್ಳುತ್ತವೆ.
ಈ ವರ್ಷ ಸಂಗ್ರಹಾಲಯದಲ್ಲಿರುವ ವಿಶಿಷ್ಟ ಜೈನ ವಿಗ್ರಹಗಳು ಹಾಗೂ ಕಲಾ ಕೃತಿಗಳು ಜೈನ ಧರ್ಮದ ಸ್ಥೂಲ ಪರಿಚಯವನ್ನು ಮಾಡಿಸುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿನ ಹಲವು ವಿಗ್ರಹಗಳು, ಕಲಾಕೃತಿಗಳು, ಶಾಸನಗಳು ಹಾಗೂ ಇನ್ನಿತರ ವಸ್ತುಗಳು ಇತಿಹಾಸ ಹಾಗೂ ಸಂಸ್ಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ.
Our Special Thanks to Chhatrapati Shivaji Maharaj Vastu Sangrahalaya, Mumbai.