+ ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 53 ಕಿ.ಮಿ. ಹಾಗೂ ಅಜ್ಮೇರ್ ನಿಂದ 86 ಕಿ.ಮಿ. ದೂರದಲ್ಲಿರುವ ಜೈನ ಕೇಂದ್ರ.
+ 17ನೇ ಶತಮಾನದಲ್ಲಿ ಜೈನ ಸಾಹಿತ್ಯ ಕೇಂದ್ರವಾಗಿ ಮೆರೆದ ಪ್ರಮುಖ ಕ್ಷೇತ್ರ.
+ ಶ್ರೀ ಆದಿನಾಥ ಸ್ವಾಮಿ ದಿಗಂಬರ ಜೈನ ಬಸದಿ – ಬಡಾ ಮಂದಿರ್ ಹಾಗೂ ಶ್ರೀ ನೇಮಿನಾಥ ಸ್ವಾಮಿ ಬಸದಿ – ಕಂಚ್ ಮಂದಿರ್ ಇರುವ ಕ್ಷೇತ್ರ.
+ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿನ ಎಡಬಲಗಳಲ್ಲಿ ನೆಲಮಾಳಿಗೆಗಳಿದ್ದು ಅಪೂರ್ವವಾದ ದಿಗಂಬರ ಜಿನಬಿಂಬಗಳಿವೆ.
ಲೇಖನ ಹಾಗೂ ಚಿತ್ರಗಳು: ನಿತಿನ್ ಹೆಚ್.ಪಿ., ಬೆಂಗಳೂರು
ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 53 ಕಿ.ಮಿ. ಹಾಗೂ ಅಜ್ಮೇರ್ ನಿಂದ 86 ಕಿ.ಮಿ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 12ರ ಬದಿಯಲ್ಲಿರುವ ಮೋಜಮಾಬಾದ್ ಅಥವಾ ಮೌಜಮಾಬಾದ್ 17ನೇ ಶತಮಾನದಲ್ಲಿ ಪ್ರಮುಖ ಜೈನ ಸಾಹಿತ್ಯ ಕೇಂದ್ರವಾಗಿ ಮೆರೆದ ಕ್ಷೇತ್ರ.
ಈ ಪ್ರಮುಖ ಅತಿಶಯ ಜೈನ ಸಾಹಿತ್ಯ ಕೇಂದ್ರದ ಪರಿಚಯವನ್ನು ಮಾಡಿಕೊಳ್ಳೋಣ.
ಮೌಜಮಾಬಾದ್ ನ ಬಸದಿಗಳು – ಇಲ್ಲಿ ನಾವು ಬಡಾ ಮಂದಿರ್ ಅಥವಾ ಶ್ರೀ ಆದಿನಾಥ ಬಸದಿ ಹಾಗೂ ಕಂಚ್ ಮಂದಿರ್ ಇವುಗಳನ್ನು ಕಾಣಬಹುದು.
ಶ್ರೀ ಆದಿನಾಥ ಸ್ವಾಮಿ ದಿಗಂಬರ ಜೈನ ಬಸದಿ – ಈ ಬಸದಿಯನ್ನು ಕ್ರಿ.ಶ.1607ರಲ್ಲಿ ಮೊಗಲ್ ದೊರೆ ಅಕ್ಬರ್ ರ ನಂಬಿಕರ್ಹ ಸೇನಾಧಿಪತಿ ಅಮೀರ್ ನ ರಾಜಾ ಮಾನ್ ಸಿಂಗ್ ಅವರ ಆಪ್ತ ಹಾಗೂ ಅಮಾತ್ಯರಾಗಿದ್ದ ನಾನೂಮಲ್ ಗೋಡ ಅವರು ನಿರ್ಮಿಸಿದರು. ಇಲ್ಲಿನ ಎರಡು ಬಸದಿಗಳಲ್ಲಿ ಇದು ಅತ್ಯಂತ ದೊಡ್ಡದಾದದ್ದು ಆದ್ದರಿಂದ ಇದನ್ನು ಬಡಾ ಮಂದಿರ್ ಎಂದು ಕರೆಯುತ್ತಾರೆ.
ಶ್ರೀ ಆದಿನಾಥ ಸ್ವಾಮಿ ದಿಗಂಬರ ಜೈನ ಬಸದಿಯ ಬಲ ನೆಲಮಾಳಿಗೆಯ ವಿಗ್ರಹಗಳು
ಶ್ರೀ ಆದಿನಾಥ ಸ್ವಾಮಿ ದಿಗಂಬರ ಜೈನ ಬಸದಿಯ ಎಡ ನೆಲಮಾಳಿಗೆಯ ವಿಗ್ರಹಗಳು
- ಬಸದಿಯ ಗೋಪುರಗಳು – ಈ ಬಸದಿಯಲ್ಲಿ ಆಕರ್ಷಕವಾಗಿ ಕಲ್ಲಿನಿಂದ ಕೆತ್ತಲಾದ ಮೂರು ಗೋಪುರಗಳಿವೆ. ಹಲವಾರು ತೀರ್ಥಂಕರರ, ಯಕ್ಷ-ಯಕ್ಷಿಯರ ಹಾಗೂ ಇತರ ಕೆತ್ತನೆಗಳನ್ನು ಗೋಪುರದಲ್ಲಿ ನಾವು ಕಾಣಬಹುದು.
- ಬೌಹರೇನ್ ಮಂದಿರ್ – ಮುಖ್ಯ ಮಂದಿರದ ಎಡ-ಬಲಗಳಲ್ಲಿ ನೆಲ ಮಳಿಗೆಗಳಿದ್ದು ನೆಲಮಾಳಿಗೆಯಲ್ಲಿಯೂ ಕೂಡ ವಿಗ್ರಹಗಳಿರುವುದರಿಂದ ಈ ಬಸದಿಯನ್ನು ಬೌಹರೇನ್ ಮಂದಿರ್ ಎಂದು ಕೂಡ ಕರೆಯುತ್ತಾರೆ.
- ಬಸದಿಯಲ್ಲಿನ ವಿಗ್ರಹಗಳು – ಬಸದಿಯಲ್ಲಿನ ನೆಲಮಹಡಿಯಲ್ಲದೇ ನೆಲಮಾಳಿಗೆಯಲ್ಲಿಯೂ ಕೂಡ ಹಲವಾರು ದಿಗಂಬರ ಜಿನ ವಿಗ್ರಹಗಳನ್ನು ಕಾಣಬಹುದು. ನೆಲಮಹಡಿಯಲ್ಲಿನ ವಿಗ್ರಹಗಳಲ್ಲಿ ಮುಖ್ಯ ವೇದಿಯಲ್ಲಿರುವ ಆದಿನಾಥ ತೀರ್ಥಂಕರರ ವಿಗ್ರಹ ಹಾಗೂ ಚತುರ್ಮುಖ ನಂದೀಶ್ವರ ವಿಗ್ರಹಗಳನ್ನು ವಿಶೇಷವಾಗಿ ಹೆಸರಿಸಬಹುದು.
- ಬಲ ನೆಲಮಾಳಿಗೆಯ ವಿಗ್ರಹಗಳು – ಇಲ್ಲಿ ಹಲವಾರು ದಿಗಂಬರ ಜೈನ ವಿಗ್ರಹಗಳಿದ್ದು ವಿಶೇಷವಾಗಿ ಭಗವಾನ್ ಆದಿನಾಥರ ಪದ್ಮಾಸನಯುಕ್ತ ವಿಗ್ರಹ ಹಾಗೂ ಕೂಷ್ಮಾಂಡಿನಿ ಮಾತೆಯು ತನ್ನೆರಡು ಮಕ್ಕಳುಗಳೊಂದಿಗಿರುವ ವಿಗ್ರಹಗಳು ವಿಶೇಷವಾದದ್ದು.
- ಎಡ ನೆಲಮಾಳಿಗೆಯ ವಿಗ್ರಹಗಳು – ಇಲ್ಲಿ ನಾವು ಬೃಹದಾಕಾರವಾದ ಭಗವಾನ್ ಆದಿನಾಥ, ಅಜಿತನಾಥ ಹಾಗೂ ಶಂಭವನಾಥರ ಪದ್ಮಾಸನ ಯುಕ್ತ ವಿಗ್ರಹಗಳನ್ನು ಕಾಣಬಹುದು.
- ಶಾಸ್ತ್ರ ಭಂಡಾರ – ಈ ಬಸದಿಯಲ್ಲಿ 68 ಶಾಸ್ತ್ರಗಳಿರುವ ಶಾಸ್ತ್ರಭಂಡಾರವನ್ನು ಕಾಣಬಹುದು. ಇಲ್ಲಿನ ಶಾಸ್ತ್ರಗ್ರಂಥಗಳು ಹಾಗೂ ಈ ಕ್ಷೇತ್ರದಲ್ಲಿ ಬರೆಯಲಾದ ಶಾಸ್ತ್ರ ಗ್ರಂಥಗಳು ನಮಗೆ ಈ ಕ್ಷೇತ್ರವು ಜೈನ ಸಾಹಿತ್ಯ ಕೇಂದ್ರವಾಗಿತ್ತೆಂದು ಹೇಳಲು ಸಾಕಷ್ಟು ಪುರಾವೆಯನ್ನೊದಗಿಸುತ್ತದೆ. ಇಲ್ಲಿನ ಶಾಸ್ತ್ರ ಭಂಡಾರದಲ್ಲಿನ ಗ್ರಂಥಗಳ ವಿವರ ಈ ಕೆಳಗಿನಂತಿದೆ:
- ಇಲ್ಲಿ15ನೇ ಶತಮಾನದಿಂದ ಓಲೆಗರಿ ಗ್ರಂಥಗಳನ್ನು ಕಾಣಬಹುದು.
- ಕ್ರಿ.ಶ. 1538 ರಲ್ಲಿ ಧನಪಾಲ ಕವಿಯ ‘ಭವಿಷ್ಯದತ್ತ ಚರಿತ’ವನ್ನು ಇಲ್ಲಿಯೇ ಬರೆಯಲಾಗಿತ್ತು. ಈಗ ಅದನ್ನು ಅಮೇರ್ ನ ಗ್ರಂಥ ಭಂಡಾರದಲ್ಲಿ ಸಂರಕ್ಷಿಸಿ ಇಡಲಾಗಿದೆ.
- ಕ್ರಿ.ಶ. 1573 ರಲ್ಲಿ ಇಲ್ಲಿಯೇ ರಚಿಸಲಾದ ವಸುನಂದಿಯ ‘ಶ್ರಾವಕಾಚಾರ’ವನ್ನು ಭದಿಚಂದನ ಗ್ರಂಥ ಭಂಡಾರದಲ್ಲಿ ಕಾಣಬಹುದು.
- ಕ್ರಿ.ಶ.1589 ರಲ್ಲಿ ಅಪಭ್ರಂಶ ಭಾಷೆಯ ‘ಆದಿನಾಥ ಪುರಾಣ’ವನ್ನು ಇಲ್ಲಿನ ಆದಿನಾಥ ಬಸದಿಯಲ್ಲಿ ನಕಲು ಮಾಡಲಾಗಿತ್ತು.
- ಕ್ರಿ.ಶ.1603 ರಲ್ಲಿ ಇದೇ ಊರಿನವರಾದ ಚಿತಾರ್ ತೋಲಿಯಾರವರು ತಮ್ಮ ‘ಹೋಲಿ ಕಿ ಕಥಾ’ ಗ್ರಂಥವನ್ನು ಬರೆದರು.
- ಸಕಲಕೀರ್ತಿ ಹಾಗೂ ಜ್ಞಾನ ಕೀರ್ತಿಯ ‘ಯಶೋಧರ ಚರಿತೆ’ಯನ್ನು 1603ರಲ್ಲಿ ಇಲ್ಲಿ ನಕಲು ಮಾಡಲಾಗಿತ್ತು. ನಂತರ ಅದರ ಪ್ರತಿಗಳನ್ನು ರಾಜಸ್ಥಾನದ ವಿವಿಧ ಗ್ರಂಥಭಂಡಾರಗಳಿಗೆ ಕಳುಹಿಸಿಕೊಡಲಾಯಿತು.
- ಪುಷ್ಪದಂತ ಕವಿಯ ಅಪಭ್ರಂಶ ಭಾಷೆಯ ‘ಜಶಹರ ಚರ್ಯ’ದ ಎರಡು ಪ್ರತಿಗಳನ್ನು ಇಲ್ಲಿ ಕಾಣಬಹುದು. ಅದರಲ್ಲಿ ಒಂದು ಪ್ರತಿ ಅಪೂರ್ಣವಾಗಿದೆ. ಇದರಲ್ಲಿನ ವರ್ಣ ಚಿತ್ರಗಳು ಆಕರ್ಷಕವಾಗಿವೆ. ಈ ಗ್ರಂಥವನ್ನು ಇನ್ನೆಲ್ಲಿಯೂ ಕಾಣಲಾಗುವುದಿಲ್ಲ.
- ಇಲ್ಲಿರುವ ಇತರ ಪ್ರಮುಖ ಓಲೇಗೇರಿ ಗ್ರಂಥಗಳು
- ಕುಂದಕುಂದಾಚಾರ್ಯರ ’ಪ್ರವಚನಸಾರ’
- ’ಜಿನೇಂದ್ರ ವ್ಯಾಕರಣ’
- ಅಮರ ಕೀರ್ತಿಯ ಸತ್ಕರ್ಮೋಪದೇಶ ’ರತ್ನಮಾಲಾ’
- ಆಶಾಧರರ ’ತ್ರಿಷಷ್ಠಸ್ಮೃತಿ ಶಾಸ್ತ್ರ’
- ಅಮಿತಗತಿ ಆಚಾರ್ಯರ ’ಯೋಗಸಾರ’
- ಯೋಗದೇವರ ’ತತ್ವಾರ್ಥಸೂತ್ರ ಟಿಪ್ಪಣಿ’
- ಪ್ರಭಾಚಂದ್ರರ ’ಆದಿಪುರಾಣ’ ಟಿಪ್ಪಣಿ
- ಪೃಥ್ವಿರಾಜನು ಬರೆದಿರುವ ಅತಿವಿರಳ ಕೃತಿಯಾದ ‘ಕೃಷ್ಣ ರುಕ್ಮಿಣಿ ವೇಳಿ’ ಗ್ರಂಥವನ್ನು ಇಲ್ಲಿ ಕಾಣಬಹುದು.
ಕಂಚ್ ಮಂದಿರ್ – ಈ ಬಸದಿಯಲ್ಲಿ ನಾವು ಸಾಕಷ್ಟು ಕನ್ನಡಿಯ ಕುಸುರಿ ಕೆಲಸವನ್ನು ಕಾಣಬಹುದು. ಈ ಬಸದಿಯಲ್ಲಿ ಕಪ್ಪು ಶಿಲೆಯ ಪದ್ಮಾಸನ ಯುಕ್ತ ನೇಮಿನಾಥ ತೀರ್ಥಂಕರ ವಿಗ್ರಹವು ಮೂಲ ಸ್ವಾಮಿಯಾಗಿ ಪೂಜಿಸಲ್ಪಡುತ್ತಿದೆ. ಇದಲ್ಲದೆ ಈ ಬಸದಿಯಲ್ಲಿ ನಾವು ಭಗವಾನ್ ಆದಿನಾಥ, ಪಾರ್ಶ್ವನಾಥ ಹಾಗೂ ಇತರ ತೀರ್ಥಂಕರರ ವಿಗ್ರಹಗಳನ್ನು ಕಾಣಬಹುದು.
ವಸತಿ ವ್ಯವಸ್ಥೆ – ಆದಿನಾಥ ಬಸದಿ/ಬಡಾ ಮಂದಿರದ ಪಕ್ಕದಲ್ಲಿರುವ ಹಾಲ್ನಲ್ಲಿ ಯಾತ್ರಿಕರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ವಿಳಾಸ – ಶ್ರೀ ಆದಿನಾಥ ಸ್ವಾಮಿ ದಿಗಂಬರ ಜೈನ ಬಸದಿ, ಮೋಜಮಾಬಾದ್/ಮೌಜಮಾಬಾದ್, ಜಯಪುರ ಜಿಲ್ಲೆ, ರಾಜಸ್ಥಾನ, ರಾಮ್ಜಿ – 9694268050.