ದಕ್ಷಿಣ ಮಧುರೆಯಲ್ಲಿ ಮುನಿಗುಪ್ತರೆಂಬ ಮುನಿಗಳಿದ್ದರು. ಅವರಲ್ಲಿ ಚಂದ್ರಾಂಭನೆಂಬ ಮುನಿದೀಕ್ಷೆಯನ್ನು ಅಪೇಕ್ಷಿಸಿದ. ’ಎಲ್ಲ ಪರಿಗ್ರಹಗಳನ್ನು ತ್ಯಜಿಸು’ ಎಂದರು ಗುರುಗಳು. ಆತ ಎಲ್ಲವನ್ನು ತೊರೆದ. ಆದರೆ ವಿದ್ಯಾಧರ ವಿದ್ಯೆಗಳನ್ನು ತೊರೆಯದಾದ. ಆಗ ಗುರುಗಳು ನಿನಗೆ ಮುನಿದೀಕ್ಷೆ ಸಲ್ಲದು, ಬ್ರಹ್ಮಚಾರಿಯಾಗಿರು ಎಂದರು.
ಆ ಬ್ರಹ್ಮಚಾರಿ ಉತ್ತರ ಮಧುರೆಅ ಜಿನಾಲಯಗಳನ್ನು ದರ್ಶನ ಮಾಡುವ ಆಸೆಯಿಂದ ಗುರುಗಳ ಅನುಮತಿ ಪಡೆದ. ಅವರು ಅನಿಮತಿ ನೀಡುತ್ತಾ, ’ಅಲ್ಲಿರುವ ಅಮೂಢದೃಷ್ಟಿಯ ಉತ್ತಮ ಶ್ರಾವಕಿ ರೇವತಿ ಮಹಾದೇವಿಗೆ ನಮ್ಮ ಆಶೀರ್ವಾದ ತಿಳಿಸಿ’ ಎಂದರು. ’ಆಕೆಯಲ್ಲೇನು ವಿಶೇಷತೆ, ಆಕೆಯನ್ನು ಪರೀಕ್ಷಿಸ ಬೇಕು’ ಎಂದುಕೊಂಡ.
ಚಂದ್ರಾಭ ತನ್ನ ವಿದ್ಯಾಧರ ವಿದ್ಯೆಯಿಂದ ತಕ್ಷಣ ಉತ್ತರ ಮಧುರೆಗೆ ಆಗಮಿಸಿದ. ಅಲ್ಲಿನ ಪೂರ್ವದಿಕ್ಕಿನಲ್ಲಿ ಚತುರ್ಮುಖ ಬ್ರಹ್ಮನ ರೂಪವನ್ನು ಧರಿಸಿ ವಿರಾಜಮಾನನಾದ. ಊರಿನ ಜನರೆಲ್ಲ ಜೈಕಾರಹಾಕುತ್ತಾ ಪೂಜೆಗೆ ಬಂದರು.
ಆದರೆ ರೇವತಿ ರಾಣಿ ಬರಲಿಲ್ಲ. ಆಗ ಮಾರನೆಯ ದಿನ ಚಂದ್ರಾಭ ಉತ್ತರ ದಿಕ್ಕಿನಲ್ಲಿ ಸಾಕ್ಷಾತ್ ತೀರ್ಥಂಕರ ವರ್ಧಮಾನ ಸ್ವಾಮಿಯ ರೂಪವನ್ನು ಧರಿಸಿ ವಿರಾಜಮಾನನಾದ.
ಹಿಂದೆ ಬಂದಿದ್ದ ಜನರೆಲ್ಲರು ವರ್ಧಮಾನ ಜಿನರಿಗೆ ಜೈಕಾರ ಹಾಕುತ್ತಾ ಬಂದರು. ಆದರೆ ರೇವತಿ ರಾಣಿಯ ಸುಳಿವೇ ಇಲ್ಲ. ಆ ಸಂದರ್ಭದಲ್ಲಿ ಆಕೆಯ ಪತಿ ’ಬ್ರಹ್ಮ, ವಿಷ್ಣು, ಮಹೇಶ್ವರರು ಬಂದಾಗ ನೀನು ದರ್ಶನಕ್ಕೆ ಬರಲಿಲ್ಲ. ಈಗ ನಿನ್ನ ಕುಲಸ್ವಾಮಿ ಯಾದ ವರ್ಧಮಾನ ಸ್ವಾಮಿಯೇ ಬಂದಿದ್ದಾರೆ. ದರ್ಶನಕ್ಕೆ ಹೋಗೋಣವೇ?’ ಎಂದು ವಿಚಾರಿಸಿದ.
ಆಗ ರೇವತಿದೇವಿ ನಗುನಗುತ್ತಾ, ’ಅಂತಿಮ ತೀರ್ಥಂಕರರಾದ ವರ್ಧಮಾನರು ಆಗಲೇ ಮುಕ್ತರಾಗಿದ್ದಾರೆ. ಅವರೆಲ್ಲಿ ಮತ್ತೆ ಬರುತ್ತಾರೆ? ಇದೆಲ್ಲ ಜನರನ್ನು ಭ್ರಮೆ ಗೊಳಿಸಲು, ವಂಚಿಸಲು ಬಯಸುವ ಇಂದ್ರಜಾಲವಿದ್ಯೆ ಬಲ್ಲವರ ಕಾರ್ಯ. ಮೂಢರಂತೆ ಅಮೂಢದೃಷ್ಟಿಗಳಾದ ನಾವೂ ವರ್ತಿಸುವುದೇ?” ಎಂದಳು. ಇದನ್ನು ತಿಳಿದ ಚಂದ್ರಾಭ ತನ್ನ ಮಾಯೆಯನ್ನು ವಿಸರ್ಜಿಸಿದ. ರೇವತಿಯಲ್ಲಿಗೆ ಬಂದು, ಆಕೆಯನ್ನು ಹೊಗಳಿ, ಮುನಿಗುಪ್ತರ ಆಶೀರ್ವಾದ ತಿಳಿಸಿ ಹೊರಟುಹೋದ.
ದೇವ-ಗುರು-ಲೋಕ ವಿಚಾರಗಳಲ್ಲಿ ನಾವು ಸರಿಯಾದ ತಿಳಿವಳಿಕೆ ಸಂಪಾದಿಸಬೇಕು. ಅಲ್ಲದೆ ನಾವು ಯಾವುದರಲ್ಲಿ ಶ್ರದ್ಧೆಯಿಡುತ್ತೇವೆಯೋ ಅದರಲ್ಲಿ ಮೌಢ್ಯವಿಲ್ಲದ ಅಚಲನಿಷ್ಠೆಯಿಡಬೇಕು. ಆಗ ಮಾತ್ರ ನಾವು ಉನ್ನತವಾದುದನ್ನು ಸಾಧಿಸಲು ಸಾಧ್ಯ, ಅಲ್ಲವೆ?