Skip to content
Home » ಕನ್ನಡ » ವಿಚಾರ » ಶೃಂಗೇರಿಯ ಪಾರ್ಶ್ವನಾಥ ಬಸದಿಯ ದಾನ ಶಾಸನ

ಶೃಂಗೇರಿಯ ಪಾರ್ಶ್ವನಾಥ ಬಸದಿಯ ದಾನ ಶಾಸನ

    ಶೃಂಗೇರಿಯ ಪಾರ್ಶ್ವನಾಥ ಬಸದಿಯಲ್ಲಿರುವ ಕ್ರಿ.ಶ. 1161 ಕ್ಕೆ ಸೇರಿದ ಬಸದಿಯ ಸ್ಥಾಪನೆಯ ವಿವರ ಹಾಗೂ ಬಸದಿಗೆ ದಾನ ನೀಡಿದ ವಿವರಗಳನ್ನೊದಗಿಸುವ ಶಾಸನ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ.

    ಶಾಸನದ ಸ್ಥಳ – ಪಾರ್ಶ್ವನಾಥ ಬಸದಿಯ ನವರಂಗದಲ್ಲಿಟ್ಟಿರುವ ಶಾಸನ.

    ಶಾಸನದ ಕಾಲ – ಶಾಸನೋಕ್ತ ಕಾಲವು ಶಕವರ್ಷ ೧೦೮೮, ವಿಕ್ರಮ ಸಂವತ್ಸರದ, ಕುಂಬ (ಮಾಸ), ಶುದ್ಧ ದಶಮಿ ಗುರುವಾರ ಎಂದಿದೆ. ಇದು ಕ್ರಿ.ಶ ಫೆಬ್ರವರಿ ೭ ೧೧೬೧ರ ಮಂಗಳವಾರಕ್ಕೆ ಸರಿಹೊಂದುತ್ತದೆ.

    ಶಾಸನದ ಮುಖ್ಯಾಂಶಗಳು –

    1. ಶಾಸನವು ಬಸದಿಯ ನಿರ್ಮಾಣದ ವಿವರಗಳನ್ನು ನೀಡುತ್ತಾ, ಯಾವ ವ್ಯಕ್ತಿಯ ನೆನಪಿನಲ್ಲಿ ಬಸದಿಯನ್ನು ನಿರ್ಮಾಣ ಮಾಡಲಾಯಿತೋ ಆತನ ಕುಟುಂಬದ ವಂಶ ವೃಕ್ಷವನ್ನು ನೀಡುತ್ತದೆ.
    2. ಬಸದಿಗಾಗಿ ಮಾಡಲಾದ ದಾನದ ವಿವರಗಳನ್ನು ನೀಡುತ್ತದೆ.

    ಶಾಸನದ ವಿವರ
    ಶ್ರೇಷ್ಠವೂ ಗಂಭೀರವೂ ಆದ ಸ್ವಾಗ್ವಾದವೆಂಬ ಲಾಂಛನಯುಕ್ತನಾದ ಮೂರುಲೋಕಗಳಿಗೆ ಒಡೆಯನಾದ ತ್ರೈಲೋಕ್ಯನಾಥನ ಜಿನಶಾಸನವು ಜಯಿಸಲಿ.

    ಬಸದಿಯ ನಿರ್ಮಾಣ ವಿವರ – ನಿಡುಗೋಡಿನ ವಿಜಯನಾರಾಯಣ ಶಾಂತಿಸೆಟ್ಟಿಯ ಮಗ ಬಾಸಿಸೆಟ್ಟಿ ಇವನ ಅಕ್ಕ ಸಿರಿಯಜ್ಜಿ ಸೆಟ್ಟಿತಿ. ಈಕೆಯ ಮಗಳು ನಾಗವೆಸೆಟ್ಟಿತಿ, ಈಕೆಯ ಮಗಳು ಸಿರಿಯಲೆಸೆಟ್ಟತಿ. ಸಿರಿಯಲೆಸೆಟ್ಟಿತಿ ಹಾಗೂ ಹೆಮ್ಮಾಡಿಸೆಟ್ಟಿ ದಂಪತಿಗಳ ಮಗನಾದ ಮಾರಿಸೆಟ್ಟಿಯ ಜ್ಞಾಪಕಾರ್ಥವಾಗಿ ಈ ಬಸದಿಯನ್ನು ನಿರ್ಮಿಸಲಾಯಿತು.

    ಶಾಸನವು ಸ್ವಲ್ಪ ತುಟಿತವಾಗಿರುವುದರಿಂದ ಈ ಬಸದಿಗೆ ಬಿಟ್ಟ ಭೂದಾನ ಮತ್ತು ತೆರಿಗೆಗಳ ವಿಚಾರ ಅಸ್ಪಷ್ಟವಾಗಿದೆ.

    ದಾನದ ವಿವರ – ಒಂದು ಬಂಡಿ, ಹೊಳೆ(?) ಹದುವಿನ ಹೊರದ ಒಂದು ಖಂಡುಗ ಮಣ್ಣು, ಸುಳ್ಳಿಗೋಡಿನಲ್ಲಿ ಆರು ಖಂಡುಗದಷ್ಟು ಭೂಮಿಯನ್ನು ಹಣವನ್ನು, ಒಬ್ಬಳು ಸೇವಕಿ(ತೊತ್ತು), ಒಂದು ಹೇರು ಉಪ್ಪು, ಐವತ್ತಲೆ, ಅರಸಿನ ಮಳವೆಗೆ ವೀಸ(?) ಇವುಗಳನ್ನು ಬಸದಿಗೆ ದಾನ ನೀಡಲಾಯಿತು.

    ಶಾಪಾಶಯ – ಶಾಸನವು ಶಾಪಾಶಯದೊಂದಿಗೆ ಮುಕ್ತಾಯವಾಗುತ್ತದೆ. ಈ ಶಾಸನದಲ್ಲಿರುವ ವಿವರಗಳನ್ನು ಪಾಲಿಸದವರು ಸಾವಿರ ಜನರನ್ನು ಹತ್ಯೆಗೈದ ಪಾಪಕ್ಕೊಳಗಾಗುತ್ತಾರೆ ಎಂದಿದೆ.

    ಉಲ್ಲೇಖಗಳು

    1. ECXI(R) Sg.2
    2. MAR 1933 No.3
    3. ಕರ್ನಾಟಕ ಜೈನ ಶಾಸನಗಳು – ಸಂಪುಟ ೨, ಪುಟ – ೪೫೬-೪೫೭, ಮುಖ್ಯ ಸಂಪಾದಕರು: ಡಾ.ದೇವರಕೊಂಡಾರೆಡ್ಡಿ
    error: Jain Heritage Centres - Celebrating Jain Heritage.....Globally!