ಉತ್ತಮ ಆಕಿಂಚನ್ಯ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಒಂಬತ್ತನೇ ಧರ್ಮ.
“ಕಿಂಚನ” ಎಂಬ ಶಬ್ದಕ್ಕೆ “ಸ್ವಲ್ಪ” ಎಂದು ಅರ್ಥವಾಗುವುದು. ಅಂದರೆ ಇದು ನನ್ನದು” ಎಂಬ ಭಾವನೆಗೆ ವಿಷಯವಾದ ಯಾವುದಾದರೂ ಸ್ವಲ್ಪ ವಸ್ತುವೆಂದು ಅಭಿಪ್ರಾಯ.
ಈ ಕಿಂಚನ ಶಬ್ದಕ್ಕೆ ನಿಷೇಧಾರ್ಥಬೋಧಕ ವಾದ “ಆ” ಸೇರಿದರೆ “ಆಕಿಂಚನ” ಎಂದಾಗುವುದು. ಇದಕ್ಕೆ “ನನ್ನದು” ಎಂಬ ಭಾವನೆಗೆ ವಿಷಯವಾದ ಯಾವ ಸ್ವಲ್ಪ ವಸ್ತುವೂ ಇಲ್ಲದವನೆಂದು ಅರ್ಥ. ಈ ಅಕಿಂಚನನ ಭಾವಕ್ಕೆ ಅಥವಾ ಕಾರ್ಯಕ್ಕೆ “ಆಕಿಂಚನ” ಎಂದು ಹೆಸರು. ಈ ಅಭಿಪ್ರಾಯವನ್ನು ರಾಜವಾರ್ತಿಕಕಾರರು “ಮಮೇದಮಿತ್ಯಭ ಸಂಧಿನಿವೃತ್ತಿರಾಕಿಂಚನ್ಯಂ” ಎಂಬ ವಾರ್ತಿಕದಿಂದ ಸ್ಪಷ್ಟಪಡಿಸಿದ್ದಾರೆ. ನನ್ನದೆಂಬ ಆಸಕ್ತಿಯನ್ನು ಬಿಡುವುದೇ ಆಕಿಂಚನವೆಂದು ಇದರ ಅರ್ಥ. ಈ ಅಭಿಪ್ರಾಯವು ಮೇಲೆ ಹೇಳಲ್ಪಟ್ಟ ಉತ್ತಮ ತ್ಯಾಗಧರ್ಮದಲ್ಲಿ ಅಡಕವಾಗಿರುವುದರಿಂದ ಆಕಿಂಚನ್ಯವೆಂದು ಪುನಃ ಏತಕ್ಕೆ ಹೇಳಬೇಕು? ಎಂದು ಪ್ರಶ್ನೆಯುಂಟಾಗಬಹುದು, ಅದಕ್ಕೆ ಉತ್ತರವೇನೆಂದರೆ, ಉತ್ತಮತ್ಯಾಗ ಧರ್ಮದಲ್ಲಿ ಚೇತನಾ ಚೇತನಪರಿಗ್ರಹಗಳ ತ್ಯಾಗದ ವಿಧಾನವಿರುವುದಾದರೂ ಮುನಿಯು ಶರೀರ ಪುಸ್ತಕ ಕಮಂಡಲು ಮೊದಲಾದ ಕೆಲವು ಆವಶ್ಯಕ ವಸ್ತುಗಳನ್ನು ತ್ಯಜಿಸಲಾಗುವುದಿಲ್ಲ. ಅನಿರ್ವಾಹಪಕ್ಷದಿಂದ ಆ ವಸ್ತುಗಳನ್ನಿಟ್ಟುಕೊಂಡರೂ ಅವುಗಳಲ್ಲಿಯೂ ಆಸಕ್ತಿ ಮತ್ತು ಸಂಸ್ಕಾರ ನಿವೃತ್ತಿಗೊಸ್ಕರ “ಇದು ನನ್ನದು” ಎಂಬ ಭಾವವನ್ನೂ ಬಿಡುವುದರಿಂದ ತ್ಯಾಗಧರ್ಮಕ್ಕೂ ಈ ಆಕಿಂಚನ್ಯ ಧರ್ಮಕ್ಕೂ ಭೇದವಿದೆ. ಈ ಅಭಿಪ್ರಾಯವು ಮೇಲ್ಕಂಡ ವಾರ್ತಿಕೆಯ ಈ ಕೆಳಗಿನ ಟೀಕೆಯಿಂದ ವ್ಯಕ್ತವಾಗುವುದು. “ಉಪಾತ್ತೇಷ್ಟಪಿ ಶರೀರಾದಿಷು ಸಂಸ್ಕಾರಾ ಹಾಯ ಮಮೇದಮಿತ್ಯಭಿಸಂಧಿ ನಿವೃತ್ತಿರಾಕಿಂಚಮಿತ್ಯಾಖ್ಯಾಯತೇ. ನಾಸ್ಯ ಕಿಂಚನಾಸ್ತೀತ್ಯಕಿಂಚನ: ಆಕಿಂಚನಸ್ಯಭಾವ ಕರ್ಮ ಚಾಕಿಂಚನಂ” ಇದರ ಭಾವಾರ್ಥವೇನೆಂದರೆ, ಪರಿಗ್ರಹಿಸಲ್ಪಟ್ಟ ಶರೀರವೇ ಮೊದಲಾದುವುಗಳಲ್ಲಿಯೂ ಸಂಸ್ಕಾರನಿವೃತ್ತಿಗೋಸ್ಕರ ಇದು ನನ್ನದೆಂಬ ಸಂಕಲ್ಪವನ್ನು ಬಿಡುವುದೇ ಆಕಿಂಚನ್ಯವೆಂದು ಹೇಳಲ್ಪಡುವುದು. ಇವನಿಗೆ ಏನೂ ಇಲ್ಲವೆಂಬುದರಿಂದ ಅಕಿಂಚನನೆನಿಸುತ್ತಾನೆ. ಆಕಿಂಚನನ ಭಾವವು ಮತ್ತು ಕ್ರಿಯೆಯು ಆಕಿಂಚನ್ನ ವಾಗಿರುತ್ತದೆ. ಇದು ಟೀಕೆಯ ಭಾವಾರ್ಥ, ಇದರಿಂದ ಉತ್ತಮ ತ್ಯಾಗ ಧರ್ಮಕ್ಕೂ ಉತ್ತಮ ಆಕಿಂಚಿನ್ಯಧರ್ಮಕ್ಕೂ ಇರುವ ಸ್ವಲ್ಪ ಅರ್ಥಭೇದವು ಗೊತ್ತಾಗುವುದು. ಮನುಷ್ಯನಿಗೆ ಚೇತನಾಚೇತನರೂಪವಾದ ಪರಿಗ್ರಹಗಳೂ ತನ್ಮೂಲಕವಾದ ಮಮಕಾರ ಅಥವಾ ಆಶೆಯೂ ಸಕಲಾನರ್ಥಗಳಿಗೂ ಪಾಪಗಳಿಗೂ ಕಾರಣಗಳಾಗಿರುವುದರಿಂದ, ಆ ಬಾಹ್ಯಪರಿಗ್ರಹಗಳನ್ನೂ ಅವುಗಳ ವಿಷಯಕವಾದ ಮಮಕಾರ ರೂಪವಾದ ಅತ್ಯಂತರ ಪರಿಗ್ರಹವನ್ನೂ ತ್ಯಜಿಸುವುದು ಪರಮೋತ್ಕೃಷ್ಟವಾದ ಧರ್ಮಗಳಾಗಿರುತ್ತವೆ. ಈ ಧರ್ಮಗಳು ಮುಮುಕ್ಷುಗಳಾದ ಪರಮಯೋಗಿಗಳಿಗೆ ಸಾಧ್ಯಗಳಲ್ಲದೆ ಸಾಮಾನ್ಯರಿಗೆ ಸಾಧ್ಯಗಳಲ್ಲ. ಗೃಹಸ್ಥ ಶ್ರಾವಕರು ಆ ಪರಮ ಪವಿತ್ರ ಧರ್ಮಗಳ ಸಂಸ್ಕಾರ ವನ್ನು ತಮ್ಮಲ್ಲಿ ಉಂಟು ಮಾಡಿಕೊಳ್ಳುವುದಕ್ಕೋಸ್ಕರ ಅವುಗಳನ್ನು ಪೂಜಿಸುವುದೂ ಭಾವಿಸುವುದೂ ಕರ್ತವ್ಯವಾಗಿದೆ.