ಹಾಸನ, ನವೆಂಬರ್ ೪, ೨೦೧೬: ಶ್ರವಣಬೆಳಗೊಳದಲ್ಲಿ 2018ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕೈಗೊಳ್ಳುವ ಮೂಲ ಸೌಕರ್ಯಗಳಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಭಾರತದ ಮಹತ್ವದ ಸಾಂಸ್ಕೃತಿಕ ವೈಭವದಿಂದ ಕೂಡಿರುವ ಶ್ರವಣಬೆಳಗೊಳದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಯಾತ್ರಾರ್ಥಿಗಳು, ಪ್ರವಾಸಿಗರು ಶ್ರವಣಬೆಳಗೊಳಕ್ಕೆ ಆಗಮಿಸುತ್ತಾರೆ. ಹಾಗಾಗಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.
ಶಾಶ್ವತ ಮತ್ತು ತಾತ್ಕಲಿಕ ವಸತಿ ಯೋಜನೆ, ಶುದ್ಧ ಕುಡಿಯುವ ನೀರು, ಸಾರಿಗೆ ಸಂಪರ್ಕ, ಭದ್ರತಾ ವ್ಯವಸ್ಥೆ ಮತ್ತಿತರ ಮೂಲ ಸೌಕರ್ಯ ಕಲ್ಪಿಸುವಾಗ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಪ್ರಾಕೃತ ವಿಶ್ವ ವಿದ್ಯಾಲಯ ನಿರ್ಮಾಣ ಸೇರಿದಂತೆ ಶಾಶ್ವತ ಕಾಮಗಾರಿಅನುಷ್ಠಾನಗೊಳಿಸಬೇಕು.
ಅಧಿಕಾರಿಗಳು ಇಲಾಖಾವಾರು ಪ್ರಸ್ತಾವನೆ ಸಿದ್ಧಪಡಿಸುವಾಗಲೇ ಈ ಬಗ್ಗೆ ಮನ್ನೆಚ್ಚರಿಕೆ ವಹಿಸಬೇಕು ಎಂದರು. ಹಾಸನ-ಬೆಂಗಳೂರು ರೈಲ್ವೆ$ಕಾಮಗಾರಿ ಡಿಸೆಂಬರ್ 2016ರಲ್ಲಿ ಪೂರ್ಣಗೊಂಡು ಪ್ರಾಯೋಗಿಕ ರೈಲು ಸಂಚಾರ ನಡೆಯಲಿದೆ. ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ವಾಹನ ನಿಲುಗಡೆಗೆ 710 ಎಕರೆ ಜಮೀನನ್ನು ರೈತರಿಂದ ಪಡೆಯಲಾಗುವುದು. ಭೂಮಿ ಬಿಟ್ಟುಕೊಟ್ಟ ರೈತರಿಗೆ ಎರಡು ವರ್ಷದ ಬೆಳೆ ಪರಿಹಾರ ನೀಡಲಾಗುವುದು.
ಈ ಬಾರಿ ಮಹಾಮಸ್ತಕಾಭಿಷೇಕಕ್ಕೆ 30 ಲಕ್ಷಕ್ಕಿಂತ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಎಂದು ಹೇಳಿದರು. ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಶಾಸಕ ಸಿ.ಎನ್.ಬಾಲಕೃಷ್ಣ, ಗೋಪಾಲಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ, ಜಿಲ್ಲಾಧಿಕಾರಿ ವಿ.ಚೈತ್ರಾ, ಜಿಪಂ ಸಿಇಒ ವೆಂಕಟೇಶಕುಮಾರ್,ಎಸ್ಪಿ$ ರಾಹುಲ್ ಕುಮಾರ್ ಶಹಪುರವಾಡ್, ಜಿತೇಂದ್ರಕುಮಾರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. – ಕೃಪೆ: ಉದಯವಾಣಿ