‘ಜೈನ ಧರ್ಮ ಜಟಿಲವಾದುದು. ಜೈನರ ತರ್ಕ ಹಾಗೂ ವಾದ ಪ್ರಖರತೆಯಿಂದ ಕೂಡಿದೆ. ಜೈನ ತರ್ಕಶಾಸ್ತ್ರಜ್ಞರನ್ನು ಮೀರಿಸಿದವರು ಜಗತ್ತಿನಲ್ಲಿ ಸಿಗುವುದು ಅಪರೂಪ’ ಎಂದು ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್ ವಿಶ್ಲೇಷಿಸಿದರು.
ಬೆಂಗಳೂರು, ಜನವರಿ ೩೦, ೨೦೧೫: ‘ಜೈನ ಧರ್ಮ ಜಟಿಲವಾದುದು. ಜೈನರ ತರ್ಕ ಹಾಗೂ ವಾದ ಪ್ರಖರತೆಯಿಂದ ಕೂಡಿದೆ. ಜೈನ ತರ್ಕಶಾಸ್ತ್ರಜ್ಞರನ್ನು ಮೀರಿಸಿದವರು ಜಗತ್ತಿನಲ್ಲಿ ಸಿಗುವುದು ಅಪರೂಪ’ ಎಂದು ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್ ವಿಶ್ಲೇಷಿಸಿದರು.
‘ಅಭಿನವ’ ಪ್ರಕಾಶನದ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ನಡೆದ ತಮ್ಮ ‘ಸಾವನ್ನು ಸ್ವಾಗತಿಸಿ (ಶ್ರವಣಬೆಳಗೊಳ ಇತಿಹಾಸದ ಹಿನ್ನೆಲೆಯಲ್ಲಿ ಇಚ್ಛಾಮರಣ ಪ್ರಕ್ರಿಯೆ)’, ‘ಸಾವನ್ನು ಅರಸಿ (ಇಚ್ಛಾಮರಣದ ಜೈನ ಸಿದ್ಧಾಂತ ಮತ್ತು ಚಾರಿತ್ರಿಕ ಸಾದೃಶ್ಯಗಳು)’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶಾಸ್ತ್ರ ಹಾಗೂ ಸ್ತ್ರೋತ್ರಗಳನ್ನು ಆರಂಭದಲ್ಲಿ ನಾವು ಕಥೆಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಬಳಿಕ ಶಾಸನಗಳನ್ನು ಹಾಗೂ ಶಿಲ್ಪಗಳನ್ನು ಹುಡುಕಿ ತಿಳಿದುಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು.
‘ಪಂಪನ ಕಾವ್ಯದ 5–6 ಪುಟಗಳನ್ನು ಇಂಗ್ಲಿಷ್ಗೆ ಭಾಷಾಂತರ ಮಾಡಲು ಒಂದೂವರೆ ತಿಂಗಳು ತೆಗೆದುಕೊಂಡಿದ್ದೂ ಇದೆ. ಕೆಲವು ಸಲ ಒಂದೊಂದು ಶಬ್ದ ಅನುವಾದ ಮಾಡಲು ಒದ್ದಾಡಿದ್ದೇನೆ. ಹೀಗೆ ಶಬ್ದಗಳನ್ನು ಪೋಣಿಸಿಕೊಂಡು ಹೋದೆ. ನಿರರ್ಗಳವಾಗಿ ಕೃತಿಯನ್ನು ಓದಿಸಿಕೊಂಡು ಹೋಗುವಂತೆ ಮಾಡುವುದು ನನ್ನ ಗುರಿಯಾಗಿತ್ತು’ ಎಂದರು.
ಹಿರಿಯ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಮಾತನಾಡಿ, ‘ಧಾರ್ಮಿಕ ಹಿನ್ನೆಲೆ, ತತ್ವಶಾಸ್ತ್ರ ಇಟ್ಟುಕೊಂಡು ಯಾವ ಬಗೆಯ ಸಾವು ಸ್ವೀಕರಿಸಬೇಕು ಎಂಬ ಬಗ್ಗೆ ಈ ಕೃತಿ ಮಾರ್ಗದರ್ಶನ ನೀಡುತ್ತದೆ. ಇದು ಬದುಕಿನ ಬಗೆಗಿನ ಕೃತಿ’ ಎಂದರು.
‘ಸಾವನ್ನು ಅರಸಿ’ ಕೃತಿಯನ್ನು ಪ್ರೊ.ಓ.ಎಲ್.ನಾಗಭೂಷಣಸ್ವಾಮಿ, ‘ಸಾವನ್ನು ಸ್ವೀಕರಿಸಿ’ ಕೃತಿಯನ್ನು ಪ್ರೊ.ಷ. ಶೆಟ್ಟರ್ ಹಾಗೂ ಸದಾನಂದ ಕನವಳ್ಳಿ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. – ಕೃಪೆ: ಪ್ರಜಾವಾಣಿ