ಮೈಸೂರು, ೯ ಅಕ್ಟೋಬರ್ ೨೦೨೨: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನಲ್ಲಿರುವ ಬಸದಿ ಹೊಸಕೋಟೆಯ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ವಿಗ್ರಹದ ಪಾದತಲದಲ್ಲಿ ಜೈನ ಶಾಸನವೊಂದು ಪತ್ತೆಯಾಗಿದೆ. ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ – www.jainheritagecentres.com ಅಂತರ್ಜಾಲ ತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕ ಶ್ರೀ ಹೆಚ್.ಪಿ. ನಿತಿನ್ರವರು ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಶಾಸನವನ್ನು ಪತ್ತೆಮಾಡಿದ್ದಾರೆ.
ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪಾದದ ಮುಂಭಾಗದಲ್ಲಿ ಪತ್ತೆಯಾಗಿರುವ ಎರಡು ಸಾಲುಗಳಿರುವ ಈ ಶಾಸನವು ಅಲ್ಲಲ್ಲಿ ತೃಟಿತವಾಗಿದೆ.
ಈ ವಿಗ್ರಹದ ಸುತ್ತಮುತ್ತಲಿನ ಪರಿಸರದ ಮಾನಸ್ಥಂಭದಲ್ಲಿರುವ ಒಂದು ಶಾಸನವು ಹೊಯ್ಸಳ ದೊರೆ ವಿಷ್ಣುವರ್ಧನನ ನಂತರ ಬಂದಂತಹ ನರಸಿಂಹ-೧ (ಕ್ರಿ.ಶ. ೧೧೬೫) ಕಾಲಕ್ಕೆ ಸೇರಿದೆ, ಅಲ್ಲದೆ ಮತ್ತೊಂದು ಶಾಸನವು ವಿಷ್ಣುವರ್ಧನನ ದಂಡನಾಯಕನಾಗಿದ್ದ ಪುಣಸಿಮ್ಮಯ್ಯನು ಬಸದಿಯೊಂದನ್ನು ನಿರ್ಮಿಸಿ ದಾನಬಿಟ್ಟ ವಿವರವನ್ನು ತಿಳಿಸುತ್ತದೆ. ಈ ಶಾಸನಗಳ ಹಿನ್ನೆಲೆ ಹಾಗೂ ಪ್ರಸ್ತುತ ಶೋಧಿಸಲಾದ ಶಾಸನದ ಮೂಲಕ ಬಾಹುಬಲಿಯ ವಿಗ್ರಹವು ೧೧-೧೨ನೇ ಶತಮಾನದಲ್ಲಿ ಕೆತ್ತಿಸಲಾಗಿದೆ ಎಂದು ನಿರ್ಧರಿಸಬಹುದು.
“ಬಸದಿ ಹೊಸಕೋಟೆಯ ಬಾಹುಬಲಿ ವಿಗ್ರಹದ ಸ್ಥಾಪಕರು ಪುಣಸಿಮ್ಮಯ್ಯನೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದರೂ ಕೂಡ ಆ ನಿಟ್ಟಿನಲ್ಲಿ ಯಾವುದೇ ಲಿಖಿತ ಆಧಾರಗಳಿಲ್ಲದಿರುವುದರಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ” ಎಂದು ನಿತಿನ್ ಅಭಿಪ್ರಾಯಪಟ್ಟಿದ್ದಾರೆ.
ಈ ಶಾಸನವನ್ನು ಓದಲು ಸಹಾಯಮಾಡಿ ಅದಕ್ಕೆ ಸಂಬಂಧಿಸಿದ ಸಂಶೋಧನೆಗೆ ಮಾರ್ಗದರ್ಶನ ನೀಡಿದ ಹರಿಹರದ ಡಾ. ರವಿಕುಮಾರ್ ಕೆ. ನವಲಗುಂದ, ಸಂಶೋಧನೆಗೆ ಸಹಕರಿಸಿದ ತಮ್ಮ ತಂದೆಯವರಾದ ಡಾ.ಹೆಚ್.ಎ.ಪಾರ್ಶ್ವನಾಥ್, ಸ್ಥಳೀಯರಾದ ಶ್ರೀ ರಾಜು, ಮೈಸೂರಿನ ಶ್ರೀ ಎನ್.ಪ್ರಸನ್ನಕುಮಾರ್ ಹಾಗೂ ಬೆಂಗಳೂರಿನ ಸಂದೇಶ್ ಜೈನ್ ರವರಿಗೆ ನಿತಿನ್ರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಬಸದಿ ಹೊಸಕೋಟೆ ಮೈಸೂರಿನಿಂದ ೩೧ ಕಿ.ಮಿ., ಮಂಡ್ಯದಿಂದ ೪೮ ಕಿ.ಮಿ. ಹಾಗೂ ಕೃಷ್ಣರಾಜಪೇಟೆಯಿಂದ ೩೧ ಕಿ.ಮಿ. ದೂರದಲ್ಲಿದೆ.