+ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಕುಂಚೂರು ಗ್ರಾಮದಲ್ಲಿನ ವಿಶಿಷ್ಟ ಚತುರ್ಮುಖ ವಿಗ್ರಹ.
+ ವರ್ತಮಾನ ಕಾಲ ಹಾಗೂ ವಿದ್ಯಾಮಾನ ತೀರ್ಥಂಕರರ ಕೆತ್ತನೆ ಒಂದೇ ಕಲ್ಲಿನಲ್ಲಿ ಇರುವ ಅಪರೂಪದ ಚತುಮುಖ ವಿಗ್ರಹ.
+ 12ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ವಿಗ್ರಹ.
+ ಸಂಶೋಧಕ ಹರಿಹರದ ಡಾ. ರವಿಕುಮಾರ ಕೆ. ನವಲಗುಂದ ರವರ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ನವೆಂಬರ್ 2013 ರಲ್ಲಿ ಪತ್ತೆಯಾದ ವಿಗ್ರಹ.
+ ವಿಗ್ರಹದ ವಿಶಿಷ್ಟತೆಯನ್ನು ಗುರುತಿಸಿದ ಜೈನ್ಹೆರಿಟೇಜ್ಸೆಂಟರ್ಸ್.ಕಾಂನ ನಿತಿನ್.ಹೆಚ್.ಪಿ.
– ನಿತಿನ್ ಹೆಚ್.ಪಿ., ಬೆಂಗಳೂರು







ಚತುರ್ಮುಖ ತೀರ್ಥಂಕರರ ವಿಗ್ರಹಗಳು ಜೈನಧರ್ಮದಲ್ಲಿ ಸಾಮಾನ್ಯ. ಅವುಗಳನ್ನು ನಾವು ಸಾಮಾನ್ಯವಾಗಿ ಮಾನಸ್ತಂಭದ ಮೇಲೆ ಕಾಣುತ್ತೇವೆ. ಅಲ್ಲದೆ ನಾಲ್ಕು ಬದಿಗಳು ಸೇರಿ ಇಪ್ಪತ್ತ್ನಾಲ್ಕು ತೀರ್ಥಂಕರರು, ಅಥವಾ ಸಹಸ್ರಕೂಟ (1008) ತೀರ್ಥಂಕರರು ಇರುವುದನ್ನು ಕಾಣುತ್ತೇವೆ. ನಾಲ್ಕು ಬದಿಗಳು ಸೇರಿ ಅರ್ಧ ಸಹಸ್ರಕೂಟ (504) ಇರುವ ವಿಗ್ರಹ ಬೆಳಗಾವಿಯಲ್ಲಿ ಪತ್ತೆ ಯಾದುದನ್ನು ಇತ್ತೀಚಿಗೆ ಕಂಡಿದ್ದೇವೆ.
ಇವೆಲ್ಲಕ್ಕಿಂತ ಭಿನ್ನವಾಗಿ ಎಲ್ಲ ನಾಲ್ಕು ಬದಿಗಳಲ್ಲಿಯೂ ಸೇರಿ ಒಟ್ಟು ನಲವತ್ತ ನಾಲ್ಕು – 44 ತೀರ್ಥಂಕರರಿರುವ ಒಂದು ಅಡಿ ಎತ್ತರದ ವಿಶಿಷ್ಟ ಚತುರ್ಮುಖ ತೀರ್ಥಂಕರರ ಶಿಲ್ಪವನ್ನು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕುಂಚೂರು ಗ್ರಾಮದಲ್ಲಿ ಕಾಣಬಹುದು.
ನವೆಂಬರ್ 2013ರಲ್ಲಿ ಹರಿಹರದ ರವಿಕುಮಾರ್ ಕೆ ನವಲಗುಂದ ಅವರು ತಮ್ಮ ಹಾವೇರಿ ಜಿಲ್ಲೆಯ ಜೈನ ಶಾಸನಗಳು ವಿಷಯದ ಮಹಾಪ್ರಬಂಧಕ್ಕೆ ಸಂಬಂಧಿಸಿದಂತೆ ಕ್ಷೇತ್ರಕಾರ್ಯ ಕೈಗೊಂಡಾಗ ಪತ್ತೆಯಾಯಿತು.
ಶ್ರೀಯುತ ರವಿಕುಮಾರ್ ಅವರು ಕುಂಚೂರಿಗೆ ಭೇಟಿ ನೀಡಿದಾಗ ಎನ್.ಎಸ್. ಎಸ್. ಕ್ಯಾಂಪಿನ ವಿದ್ಯಾರ್ಥಿಗಳು ಅಲ್ಲಿನ ಗಿಡಗಂಟೆಗಳನ್ನು ಸ್ವಚ್ಛಗೊಳಿಸುತ್ತಿದ್ದುದನ್ನು ಕಂಡು ಅವರೊಂದಿಗೆ ಸೇರಿಕೊಂಡರು. ಆಗ ಇವರಿಗೆ ನಾಲ್ಕು ಸಾಲುಗಳ ನಿಶಧಿ ಶಾಸನ ಹಾಗೂ ಈ ವಿಶಿಷ್ಟವಾದ ಚತುರ್ಮುಖ ವಿಗ್ರಹವು ಪತ್ತೆಯಾಯಿತು.
ಆರಂಭದಲ್ಲಿ ಇತರ ಸಾಮಾನ್ಯ ಚತುರ್ಮುಖ ವಿಗ್ರಹಗಳಿರುವಂತೆ ಇದು ಸಹ ಎಂದೇ ವರದಿಯಾಗಿತ್ತು. ಅನಂತರ ಪ್ರಸ್ತುತ ಲೇಖಕರು (ನಿತಿನ್ ಹೆಚ್.ಪಿ., ಬೆಂಗಳೂರು) ಈ ವಿಗ್ರಹದ ಪ್ರತಿ ಬದಿಯಲ್ಲಿರುವ ತೀರ್ಥಂಕರರನ್ನು ಪರಿಶೀಲಿಸಿದಾಗ ಪ್ರತಿಯೊಂದು ಬದಿಯಲ್ಲೂ 11 ತೀರ್ಥಂಕರಿರುವುದು ಕಂಡು ಬಂತು, ನಾಲ್ಕು ಬದಿಗಳಲ್ಲಿ 11 ತೀರ್ಥಂಕರರಿರುವುದನ್ನು ಒಟ್ಟುಗೂಡಿಸಿದರೆ ಅದು 44 ಆಗುತ್ತದೆ. ಇದನ್ನು ಮತ್ತಷ್ಟು ಪರಿಶೀಲಿಸಿ ವಿಂಗಡಿಸಿದಾಗ ವರ್ತಮಾನ ಕಾಲದ 24 ತೀರ್ಥಂಕರರು ಹಾಗೂ ಜೈನ ಸಿದ್ಧಾಂತದ ಪ್ರಕಾರ ಪ್ರಸ್ತುತ ವಿದೇಹ ಕ್ಷೇತ್ರದಲ್ಲಿರುವ 20 ವಿದ್ಯಾಮಾನ ತೀರ್ಥಂಕರರಿಗೆ ಸಮವಾಗುತ್ತದೆ ಎಂಬುದು ಕಂಡು ಬಂತು.
ಕುಂಚೂರಿನ ಈ ವಿಶಿಷ್ಟವಾದ ವಿಗ್ರಹವು ಆ ಪ್ರದೇಶದಲ್ಲಿ ಜೈನಧರ್ಮವು ಉಚ್ಚ್ರಾ ಯ ಸ್ಥಿತಿಯಲ್ಲಿದ್ದ ಪುರಾವೆಯನ್ನೊದಗಿಸುತ್ತದೆ. ಈ ಪ್ರದೇಶದಲ್ಲಿ ಇನ್ನಷ್ಟು ಸಂಶೋಧನೆಯಾದಲ್ಲಿ ಹೆಚ್ಚಿನ ವಿಷಯಗಳು ಹೊರಬರುವ ಸಾಧ್ಯತೆ ಇದೆ.
ವಿಶ್ವದಲ್ಲೇ ವಿಶಿಷ್ಟವಾದದ್ದು – ಸಾಮಾನ್ಯವಾಗಿ ಒಂದೇ ಬದಿ ಅಥವಾ ಚತುರ್ಮುಖ ವಿಗ್ರಹದಲ್ಲಿ ವರ್ತಮಾನ ಕಾಲದ 24 ತೀರ್ಥಂಕರರು, ಒಂದೇ ಬದಿಯಲ್ಲಿರುವ ತ್ರಿಕಾಲದ 72 ತೀರ್ಥಂಕರರು, ಅರ್ಧಸಹಸ್ರ ಕೂಟ – 504 ತೀರ್ಥಂಕರರಿರುವ ಚತುರ್ಮುಖ, ಸಹಸ್ರಕೂಟ – 1008 ತೀರ್ಥಂಕರಿರುವ ಚತುರ್ಮುಖ ವಿಗ್ರಹಗಳನ್ನು ಕಾಣಬಹುದು. ಆದರೆ ಈ ರೀತಿ ಒಂದೇ ವಿಗ್ರಹದಲ್ಲಿ ವರ್ತಮಾನ ಕಾಲ ಹಾಗೂ ವಿದೇಹ ಕ್ಷೇತ್ರದ ವಿದ್ಯಾಮಾನ ತೀರ್ಥಂಕರರಿರುವ ವಿಶಿಷ್ಟ ಚತುರ್ಮುಖ ವಿಗ್ರಹ ಕಂಡು ಬಂದಿರುವುದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಈ ವಿಗ್ರಹವು ವಿಶ್ವದಲ್ಲೇ ವಿಶಿಷ್ಟವಾದದ್ದೆನ್ನಬಹುದು.
ಶಿಲ್ಪದ ಕಾಲ – ಈ ವಿಗ್ರಹದೊಂದಿಗೆ ಪತ್ತೆಯಾದ ಮತ್ತೊಂದು ಸಲ್ಲೇಖನ ಸ್ಮಾರಕ ಶಾಸನದ ಕಾಲ ಹಾಗೂ ಇದರ ಶಿಲ್ಪವನ್ನು ಗಮನಿಸಿ ಇದು 12 ನೇ ಶತಮಾನಕ್ಕೆ ಸೇರಿದ್ದೆಂದು ಹೇಳಬಹುದು.
ಬೀಸ್ ಚೌಬೀಸ್ ತೀರ್ಥಂಕರ ವಿಗ್ರಹ – ಹಿಂದಿ ಭಾಷೆಯಲ್ಲಿ ಸಂಖ್ಯೆ ‘20’ ಅನ್ನು ’ಬೀಸ್’ ಎಂದು ಹಾಗೂ ’24’ ಅನ್ನು ’ಚೌಬೀಸ್’. ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಈ ವಿಗ್ರಹವನ್ನು ’ಬೀಸ್ ಚೌಬೀಸ್ ತೀರ್ಥಂಕರ’ ವಿಗ್ರಹ ಎನ್ನಬಹುದು.
ವಿಗ್ರಹದ ಸಂರಕ್ಷಣೆ – ಪತ್ತೆಯಾದ ನಂತರ ಈ ವಿಗ್ರಹವನ್ನು ಕುಂಚೂರಿನಲ್ಲಿ ಬಯಲಿನಲ್ಲೇ ಇರಿಸಲಾಗಿತ್ತು. ಪ್ರಸ್ತುತ ಲೇಖಕರು 2014ರಲ್ಲಿ ರವಿಕುಮಾರ್ ರೊಂದಿಗೆ ಕುಂಚೂರಿಗೆ ಭೇಟಿ ನೀಡಿದಾಗ ವಿಗ್ರಹದ ಮಹತ್ವವನ್ನು ಅಲ್ಲಿನ ಜನರಿಗೆ ತಿಳಿಸಿ ಅಲ್ಲೇ ಪಕ್ಕದಲ್ಲಿರುವ ಹಿಂದೂ ದೇವಾಲಯದಲ್ಲಿ ಇರಿಸಲಾಗಿತ್ತು. ಅನಂತರದ ದಿನಗಳಲ್ಲಿ ಬಯಲಿನಲ್ಲಿ ಪೀಠವೊಂದರ ಮೇಲೆ ಕಾಂಕ್ರಿಟ್ ಹಾಕಿ ಇಡಲಾಗಿದೆ. ಇಂತಹ ವಿಶಿಷ್ಟ ಚತುರ್ಮುಖ ತೀರ್ಥಂಕರರ ವಿಗ್ರಹವನ್ನು ಸಂರಕ್ಷಿಸುವುದು ಜೈನಸಮಾಜದ ಆದ್ಯ ಕರ್ತವ್ಯ.