‘ವಡ್ಡಾರಾಧನೆ’ ಹೆಸರಿನ ಕುರಿತಂತೆ ಹೊಸ ಅಂಶವೊಂದು ಅಧ್ಯಯನದಲ್ಲಿ ಕಂಡುಬಂದಿದೆ. ಇದು ಆ ಹೆಸರಿನ ಒಗಟನ್ನು ಒಡೆಯುವ ಸರಿಯಾದ ಕೀಲಿಕೈ ಎನ್ನುವಂತಿದೆ.
ಕನ್ನಡ ಸಾಹಿತ್ಯದ ಅಗ್ಗಳಿಕೆಯ ಕೃತಿಗಳಲ್ಲಿ ‘ವಡ್ಡಾರಾಧನೆ’ಯೂ ಒಂದು. ಅದು ಗದ್ಯಕೃತಿಯಾದರೂ ಕಾವ್ಯ ಎಂಬಷ್ಟರ ಮಟ್ಟಿಗೆ ಸಾಹಿತ್ಯಪ್ರೇಮಿಗಳ ಮನಸೆಳೆದಿರುವಂಥ ವಿಶಿಷ್ಟ ಕೃತಿ. 9ನೆಯ ಶತಮಾನದ ಶ್ರೀವಿಜಯ ‘ಕವಿರಾಜಮಾರ್ಗ’ದಲ್ಲಿ ತನ್ನ ಕಾಲದವರೆಗಿನ ಕನ್ನಡದ ಹೆಸರಾಂತ ಪದ್ಯಕವಿಗಳನ್ನೂ ಗದ್ಯಕವಿಗಳನ್ನೂ ಹೆಸರಿಸಿದ್ದಾನೆ. ವಿಮಲ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮುಂತಾದವರು ಆ ಕಾಲಕ್ಕೆ ಗಣ್ಯ ಗದ್ಯಕವಿಗಳೆಂದು ಅವನ ಹೇಳಿಕೆ.
ಆದರೆ, ಅವರಾರ ಗದ್ಯಕೃತಿಗಳು ಈವರೆಗೆ ದೊರೆತಿಲ್ಲ. ಈಗ ದೊರೆತಿರುವ ಪ್ರಾಚೀನ ಗದ್ಯಕೃತಿ ‘ವಡ್ಡಾರಾಧನೆ’ ಮಾತ್ರ. ಇದೆಲ್ಲ ಈಗಾಗಲೇ ಪ್ರಚುರವಾಗಿರುವ ಸಂಗತಿ. ಪ್ರಾಚೀನ ಗದ್ಯಕೃತಿಗಳಲ್ಲಿ ‘ವಡ್ಡಾರಾಧನೆ’ ಪ್ರಮುಖವಾದದ್ದು ಮತ್ತು ಮೊದಲ ಶ್ರೇಣಿಯದು ಎಂಬಲ್ಲಿ ಅನುಮಾನವಿಲ್ಲ. ಮೊದಲಿಗೆ ಇದರ ಹೆಸರೇ ನಮ್ಮನ್ನು ವಿಚಿತ್ರ ರೀತಿಯಲ್ಲಿ ಆಕರ್ಷಿಸುತ್ತದೆ. ಹಾಗೇ ಇದನ್ನು ಅಭ್ಯಸಿಸುತ್ತ ಹೋದಾಗ ಇದರ ಕಥೆಗಳು, ಅವುಗಳ ನಿರೂಪಣಾ ಕ್ರಮ, ಗದ್ಯಶೈಲಿ, ತಂತ್ರ ಮುಂತಾದವು ನಮ್ಮ ಮನಸ್ಸನ್ನು ಸೂರೆಮಾಡುತ್ತವೆ.
ಅದರ ಕಾಲ ಯಾವುದು, ಕೃತಿಕಾರ ಯಾರು, ಅವನು ಯಾವ ಸ್ಥಳದವನು, ಈ ಹೆಸರಿನ ಅರ್ಥವೇನು ಮತ್ತು ಅದು ಹೇಗೆ ಬಂದಿರಬಹುದು – ಇತ್ಯಾದಿಗಳ ವಿಷಯದಲ್ಲಿ ಬಗೆಹರಿಯದ ಸಮಸ್ಯೆಗಳೂ ಭಿನ್ನಾಭಿಪ್ರಾಯಗಳೂ ಈ ಕೃತಿ ಹಿಂದಿನ ಶತಮಾನದ ಪೂರ್ವಾರ್ಧದ ಅವಧಿಯಲ್ಲಿ ಪ್ರಕಟವಾದ ಕಾಲದಿಂದಲೂ ಸಾಗಿಬಂದಿವೆ. ‘ವಡ್ಡಾರಾಧನೆ’ ಎಂಬ ಹೆಸರನ್ನು ಕುರಿತು ಈಗಾಗಲೇ ಕೆಲವು ವಿವರಣೆಗಳು ಬಂದಿವೆ. ಆದರೆ, ಆ ವಿವರಣೆಗಳು ಪೂರ್ಣ ಸಮಾಧಾನಕರವೆಂದು ಅನ್ನಿಸಿಲ್ಲ. ಇದೀಗ ಆ ಹೆಸರು ಕುರಿತಂತೆ ಹೊಸ ಅಂಶವೊಂದು ನನ್ನ ಅಧ್ಯಯನದಲ್ಲಿ ಕಂಡುಬಂದಿದೆ. ಇದು ಆ ಹೆಸರಿನ ಒಗಟನ್ನು ಒಡೆಯುವ ಸರಿಯಾದ ಕೀಲಿಕೈ ಎಂಬಂತೆ ಕಾಣುತ್ತದೆ. ಆ ಹೆಸರು ಹೇಗೆ ಬಂದಿರಬಹುದು ಎಂಬುದನ್ನು ಈಗ ಕಂಡುಬಂದಿರುವ ಹೊಸ ಸಾಕ್ಷ್ಯಾಧಾರಗಳಿಂದ ವಿವೇಚಿಸುವುದು ಈ ಲೇಖನದ ಉದ್ದೇಶ.
ವಿವಿಧ ಬಗೆಯ ಹೆಸರುಗಳು
ಈ ಕೃತಿಗೆ ‘ವಡ್ಡಾರಾಧಣಂ’, ‘ವಡ್ಡಾರಾಧನೆ’, ಮುಂತಾದ ಹೆಸರುಗಳನ್ನು ಬಳಸಲಾಗಿದೆಯೆಂದು ಈಗಾಗಲೇ ವಿದ್ವಾಂಸರು ಹೇಳಿದ್ದಾರೆ. ಇನ್ನು ಕೆಲವೆಡೆ ಇದಕ್ಕೆ ‘ವಡ್ಡಾರಾಧನೆಯ ಕವಚ’, ‘ವಡ್ಡಾರಾಧನೆಯ ಕವಚವೆಂಬಧಿಕಾರವು’, ‘ಆರಾಧನಾ ಕರ್ಣಾಟ ಟೀಕೆ’ ಎಂಬ ಹೆಸರುಗಳಿರುವುದಾಗಿಯೂ ಹೇಳಲಾಗಿದೆ. ಇದಲ್ಲದೆ ಇದರ ಒಂದು ಹಸ್ತಪ್ರತಿಯ ಹಲಗೆಯ ಕಟ್ಟಿನ ಮೇಲೆ ಇದಕ್ಕೆ ‘ಉಪಸರ್ಗಕೇವಲಿಗಳ ಕಥೆ’ ಎಂದು ಹೆಸರು ಬರೆದಿರುವುದರಿಂದ, ಅದು ಕೂಡಾ ಇದರ ಇನ್ನೊಂದು ಹೆಸರಿರಬಹುದೆ ಎಂದು ಸಂದೇಹ. ಕೃತಿಯ ಅಂತ್ಯದಲ್ಲಿ ‘ಈ ಪೇಳ್ದ ಪತ್ತೊಂಬತ್ತು ಕಥೆಗಳ್ ಶಿವಕೋಟ್ಯಾಚಾರ್ಯರ್ ಪೇಳ್ದಾರ್ ವಡ್ಡಾರಾಧನೆ ಸಂಪೂರ್ಣಂ’ ಎಂದು ಇರುವ ಒಕ್ಕಣೆಯಿಂದ ಇದಕ್ಕೆ ‘ವಡ್ಡಾರಾಧನೆ’ ಎಂಬ ಹೆಸರು ಮೊದಲಿಂದಲೂ ಇರಬೇಕೆನಿಸುತ್ತದೆ.
ಇಷ್ಟಾದರೂ ಇದಕ್ಕೆ ಕೃತಿಕಾರ ನಿಜವಾಗಿ ಇದೇ ಹೆಸರು ಇಟ್ಟಿದ್ದನೇ? ಅಥವಾ ಏನು ಹೆಸರನ್ನಿಟ್ಟಿದ್ದ? – ಇದು ಒಂದು ಒಗಟಾಗಿದೆ. ಅಂತೂ ಮೇಲೆ ಹೇಳಿದ ಆ ಎಲ್ಲ ಹೆಸರುಗಳಲ್ಲಿ ‘ವಡ್ಡಾರಾಧನೆ’ ಎಂಬ ಹೆಸರೇ ಜನಪ್ರಿಯವಾಗಿದೆ; ಹೆಚ್ಚು ಪ್ರಚುರವಾಗಿದೆ. ಕೃತಿಕಾರ ಇದಕ್ಕೆ ಒಂದು ವೇಳೆ ಅದೇ ಹೆಸರಿಟ್ಟಿರಲೂಬಹುದು. ಇದು ಕೃತಿಕಾರನೇ ಇಟ್ಟಿರುವ ಹೆಸರಾಗಿದ್ದರೆ ಆ ಹೆಸರನ್ನು ಅವನು ಹೇಗೆ ಇಟ್ಟಿರಬಹುದು? ಅರ್ಥಾತ್ ಈ ಹೆಸರನ್ನು ಯಾವ ಕಾರಣಕ್ಕೆ ಕರೆದಿರಬಹುದು? – ಇದು ಪರಿಶೀಲಿಸಬೇಕಾದ ವಿಷಯವಾಗಿದೆ.
ಶಬ್ದಕೋಶ ಹೇಳುವ ಅರ್ಥ
ಕೃತಿಯ ಹೆಸರಲ್ಲಿ ಉತ್ತರಪದವಾಗಿ ಬರುವ ‘ಆರಾಧನೆ’ ಎಂಬುದರ ಬಗ್ಗೆ ನಿಷ್ಪತ್ತಿಸಂದಿಗ್ಧತೆ ಏನೂ ಇಲ್ಲ. ನಿಷ್ಪತ್ತಿ ಸಮಸ್ಯೆ ಇರುವುದೆಲ್ಲ ಪೂರ್ವಪದವಾಗಿ ಬರುವ ‘ವಡ್ಡ’ ಎಂಬ ಬಗ್ಗೆ ಮಾತ್ರ. ಹಾಗಾಗಿ ಈ ‘ವಡ್ಡ’ ಎನ್ನುವುದು ಏನು? ಎನ್ನುವುದನ್ನು ಪರಿಶೀಲಿಸಬೇಕಾಗಿದೆ. ‘ವಡ್ಡಾರಾಧನೆ’ ಎಂಬ ಪದಕ್ಕೆ ಶಬ್ದಕೋಶಗಳಲ್ಲಿ ‘ವಡ್ಡ+ಆರಾಧನೆ’ ಎಂದು ಪದವಿಭಾಗ ಮಾಡಿ, ‘ವಡ್ಡ’ ಎಂಬುದಕ್ಕೆ ‘ಹಿರಿಯ’ ಮತ್ತು ‘ಪೂಜ್ಯ’ ಎಂದು ಅರ್ಥ ಹೇಳಿ, ಅದಕ್ಕೆ ‘ಹಿರಿಯರ ಆರಾಧನೆ; ಪೂಜ್ಯರ ಆರಾಧನೆ’ ಎಂಬ ಅರ್ಥಗಳನ್ನು ಕೊಡಲಾಗಿದೆ.
ಈ ಅರ್ಥಗಳಿಗೆ ಅನ್ವಯಿಸಿದಂತೆ ಅದಕ್ಕೆ ಉದಾಹರಣೆಯಾಗಿ ‘ವಡ್ಡಾರಾಧನೆ’ಯನ್ನು ನಮೂದಿಸಲಾಗಿದೆ. ಅಷ್ಟೇ ಅಲ್ಲ, ಅದು ‘ಕನ್ನಡ ಸಾಹಿತ್ಯದ ಒಂದು ಪ್ರಾಚೀನ ಗದ್ಯಗ್ರಂಥದ ಪ್ರಚಲಿತ ಹೆಸರು’ ಎಂದೂ ಸಹ ಅಲ್ಲಿ ಹೇಳಿದೆ. ಹಾಗೇ ಮುಂದೆ, ‘ವಡ್ಡ’ ಎಂಬುದಕ್ಕೆ ‘ಹಳೆಯದಾದ, ಪ್ರಾಚೀನ’ ಎಂಬ ಅರ್ಥಗಳನ್ನೂ ಕೊಟ್ಟು, ಈ ಅರ್ಥಗಳಿಗೆ ಅನ್ವಯಿಸುವಂತೆ ‘ವಡ್ಡಾಚಾರ’ ಎಂಬ ಪದವನ್ನೂ ಕೊಡಲಾಗಿದೆ. ಅಂದರೆ, ಅದರ ಅರ್ಥ ಹಿಂದಿನಿಂದಲೂ ಬಂದ, ಹಳೆಯ ಆಚಾರ ಎಂದಾಗುತ್ತದೆ. ಹಾಗೇ ‘ವಡ್ಡ’ ಎಂಬುದಕ್ಕೆ ‘ದೊಡ್ಡ, ಬೃಹತ್ತಾದ’ ಎಂಬ ಅರ್ಥಗಳನ್ನು ಕೊಟ್ಟು, ಆ ಅರ್ಥಗಳಿಗೆ ಅನ್ವಯಿಸುವಂತೆ ‘ವಡ್ಡದಾರಿ’ ಎಂಬ ಪದವನ್ನು ನಮೂದಿಸಲಾಗಿದೆ. ಅದರ ಅರ್ಥ ‘ದೊಡ್ಡ ದಾರಿ’ ಎಂದಾಗಬಹುದು. ಇಷ್ಟನ್ನು ಕೊಟ್ಟಮೇಲೆ ಕೊನೆಯಲ್ಲಿ ‘ವಡ್ಡ’ ಎಂಬುದು ಪ್ರಾಕೃತದ ‘ವಡ್ಡ’ ಮತ್ತು ಸಂಸ್ಕೃತದ ‘ವೃದ್ಧ’ ಎಂಬ ಶಬ್ದಗಳಿಗೆ ಸಂಬಂಧ ಹೊಂದಿರುವಂತೆ ಸಹ ತೋರಿಸಲಾಗಿದೆ.
ಮೇಲೆ ಹೇಳಿರುವ ಹಲವು ಹೆಸರುಗಳಲ್ಲಿ, ಹೆಸರಿನ ಉತ್ತರಭಾಗವಾಗಿ ಬಹುತೇಕ ಕಡೆ ಸ್ಥಾಯಿಯಾಗಿ ಕಾಣಿಸಿಕೊಂಡಿರುವುದು ‘ಆರಾಧನೆ’ (ಆರಾಧಣಂ) ಎಂಬುದೇ. ‘ವಡ್ಡಾರಾಧನೆ’ ಎನ್ನುವ ಹೆಸರಿನ ಪೂರ್ವಪದವಾದ ‘ವಡ್ಡ’ ಎಂಬುದು ನಿಜವಾಗಿ ಹೇಗೆ ಬಂದಿರಬಹುದು ಎಂಬುದು ಒಂದು ಒಗಟೆಂಬಂತಿದೆ. ವಡ್ಡಾರಾಧನೆ ಎಂಬುದು ವೃದ್ಧಾರಾಧನಂ, ವೃದ್ಧಾರಾಧನಾ ಅಂದರೆ ಹಿರಿಯರ ಅರಾಧನೆ ಎಂಬ ಅರ್ಥದ ‘ವೃದ್ಧಾರಾಧನೆ’ಯೇ ಬರಬರುತ್ತ ‘ವಡ್ಡಾರಾಧನೆ’ ಎಂದಾಗಿರಬೇಕು ಎನ್ನುವುದು ಒಂದು ಅಭಿಪ್ರಾಯ; ಬಹುದೊಡ್ಡ ಅಥವಾ ಬೃಹತ್ತಾದ ಅರಾಧನೆ ಎಂಬ ಅರ್ಥದ ‘ಬೃಹದಾರಾಧನೆ’ಯೇ ಬರಬರುತ್ತ ‘ವಡ್ಡಾರಾಧನೆ’ ಎಂದಾಗಿರಬೇಕು ಎನ್ನುವುದು ಇನ್ನೊಂದು ಅಭಿಪ್ರಾಯ. ಈ ‘ವಡ್ಡ’ ಎನ್ನುವುದು ‘ವೃದ್ಧ’ ಎಂಬುದರಿಂದ ಬಂದಿದೆಯೇ? ಅಥವಾ ‘ಬೃಹತ್’ ಎಂಬುದರಿಂದ ಬಂದಿದೆಯೇ? ಇವೆರಡೂ ಅಲ್ಲದೆ ಬೇರೊಂದರಿಂದ ಬಂದಿದೆಯೇ? ಇದನ್ನು ಒರೆಗೆ ಹಚ್ಚಿ ನೋಡಬೇಕಾಗಿದೆ. ಆಗ ಇದರ ಮೂಲ ಏನಿರಬಹುದೆಂದು ಗೊತ್ತುಹಚ್ಚಲು ಸಾಧ್ಯವಾಗಬಹುದು.
ಕೃತಿಯ ಆರಂಭದ ವರ್ಧಮಾನ ಸ್ತುತಿ
ಈ ಕೃತಿಯ ಕೃತಿಕಾರ ವರ್ಧಮಾನ ಮಹಾವೀರ ತೀರ್ಥಂಕರನಲ್ಲಿ ಹೊಂದಿದ್ದ ಅತಿಶಯವಾದ ಭಕ್ತಿ ಈ ಕೃತಿಯ ಹೆಸರಿಗೆ ಕಾರಣವಾಗಿರಬಹುದೆ? – ಇದನ್ನು ಮನಗಾಣಬೇಕಾಗಿದೆ. ನಾವೆಲ್ಲ ನೋಡಿರುವ ಹಾಗೆ ಈ ಗ್ರಂಥ ಪ್ರಾರಂಭವಾಗುವುದು– ವರ್ಧಮಾನ ಮಹಾವೀರ ತೀರ್ಥಂಕರನನ್ನು ಕುರಿತ ಈ ಸಂಸ್ಕೃತ ಶ್ಲೋಕದ ಸ್ತೋತ್ರದಿಂದ – ಹೀಗೆ:
ನಮಃ ಶ್ರೀ ವರ್ಧಮಾನಾಯ ನಿರ್ಧೂತ ಕಲಿಲಾತ್ಮನೇ|
ಸಾಲೋಕಾನಾಂ ತ್ರಿಲೋಕಾನಾಂ ಯದ್ವಿದ್ಯಾ ದರ್ಪಣಾಯತೇ||
(ಯಾರು ತನ್ನನ್ನು ನಿರ್ಮಲಗೊಳಿಸಿಕೊಂಡು ಶುದ್ಧಾತ್ಮ ಎನಿಸಿದ್ದಾನೋ ಯಾರ ಜ್ಞಾನವು ಮೂರು ಲೋಕಗಳಲ್ಲಿರುವ ಎಲ್ಲರಿಗೂ ತಮ್ಮನ್ನು ನೋಡಿಕೊಳ್ಳುವ ಕನ್ನಡಿಯಾಗಿದೆಯೋ ಆ ವರ್ಧಮಾನ ಸ್ವಾಮಿಗೆ ನಮಸ್ಕಾರ.)
ಈ ಸಂಸ್ಕೃತ ಶ್ಲೋಕವಾದ ಮೇಲೆ ಕನ್ನಡ ಗದ್ಯದಲ್ಲಿ ಈ ಕೃತಿಯ ಮೊದಲ ಕಥೆ ಪ್ರಾರಂಭವಾಗುತ್ತದೆ. ಆ ಕಥೆ ಕೂಡಾ, ಅದೇ ವರ್ಧಮಾನ ಮಹಾವೀರ ತೀರ್ಥಂಕರನಿಗೆ ನಮಸ್ಕಾರ ಹೇಳುವುದರೊಂದಿಗೆ ಆರಂಭವಾಗುತ್ತದೆ:
‘ಶ್ರೀ ವೀರವರ್ಧಮಾನ ಭಟ್ಟಾರಕರ್ಗೆ ನಮಸ್ಕಾರಂಗೆಯ್ದು… ಮೋಕ್ಷಕ್ಕೆ ವೋದ ಮತ್ತಂ ಸರ್ವಾರ್ಥಸಿದ್ಧಿಯೊಳ್ ಪುಟ್ಟಿದ ಮಹಾಪುರುಷರ್ಕಳ ಕಥೆಗಳಂ ಪೇಳ್ವಲ್ಲಿ ಮುನ್ನಂ ಸುಕುಮಾರಸ್ವಾಮಿಯ ಕಥೆಯಂ ಪೇಳ್ವೆಂ’.
ಮೇಲೆ ತೋರಿಸಿರುವಂತೆ ಗ್ರಂಥಾರಂಭದಲ್ಲಿ ಕವಿ ಎರಡು ಬಾರಿ ವರ್ಧಮಾನಸ್ವಾಮಿಯ ಹೆಸರೆತ್ತಿ ನೆನೆದಿರುವುದು ಕಾಣುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಂದರೆ ಜೈನ ಕವಿಗಳು ಸಾಮಾನ್ಯವಾಗಿ ತಮ್ಮ ಗ್ರಂಥಾರಂಭದಲ್ಲಿ ಅವರಿಗೆ ಪರಮಪೂಜ್ಯರೆನಿಸಿದ 24 ತೀರ್ಥಂಕರರಲ್ಲಿ ತಮಗೆ ಹೆಚ್ಚು ಇಷ್ಟವಾದ ಕೆಲವರನ್ನು, ಪ್ರಸಿದ್ಧ ಜೈನ ಆಚಾರ್ಯರಲ್ಲಿ ಕೆಲವರನ್ನು, ಹಾಗೇ ಹಿಂದಿನ ಹಿರಿಯ ಕವಿಗಳಲ್ಲಿ ಕೆಲವರನ್ನು ನೆನೆಯುವುದು, ಸ್ತುತಿಸುವುದು ಸಂಪ್ರದಾಯವಷ್ಟೆ. ಆದರೆ ಇಲ್ಲಿ ಕವಿಯು ಪ್ರಸಿದ್ಧರಾದ ಜೈನ ಆಚಾರ್ಯರಲ್ಲಾಗಲಿ ಹಿಂದಿನ ಹಿರಿಯ ಕವಿಗಳಲ್ಲಾಗಲಿ ಯಾರನ್ನೂ ನೆನೆದಿಲ್ಲ. 24 ತೀರ್ಥಂಕರರಲ್ಲಿ ಬೇರೆ ಯಾರನ್ನೂ ನೆನೆಯದೆ, ವರ್ಧಮಾನ ಸ್ವಾಮಿಯೊಬ್ಬರನ್ನು ಮಾತ್ರ ನೆನೆದಿರುವುದು ಸ್ಪಷ್ಟವಾಗಿದೆ.
ಕೆಲವು ಹಸ್ತಪ್ರತಿಗಳಲ್ಲಿರುವ ವರ್ಧಮಾನ ಸ್ತುತಿ ಈ ಗ್ರಂಥದ ಕೆಲವು ಹಸ್ತಪ್ರತಿಗಳಲ್ಲಿ ಆರಂಭದಲ್ಲಿ, ಅದೇ ವರ್ಧಮಾನ ಸ್ವಾಮಿಯನ್ನು ಕುರಿತ ಪ್ರಾಕೃತ ಭಾಷೆಯ ಈ ಕೆಳಕಂಡ ಗಾಹೆ ಬರುವುದನ್ನು ವಿದ್ವಾಂಸರು ಉಲ್ಲೇಖಿಸಿದ್ದಾರೆ:
ತಿಳೋಯ ಸಬ್ಬ ಜೀವಾಣಂ ಹಿಯಂ ಧಮ್ಮೋವದೇಸಿಣಂ|
ವಡ್ಡಮಾಣಂ ಮಹಾವೀರಂ ವಂದಿತ್ತಾ ಸಬ್ಬ ವೇಇಣಂ||
ಕೊಲ್ಲಾಪುರದಲ್ಲಿರುವ ಶ್ರೀ ಲಕ್ಷ್ಮೀಸೇನ ಭಟ್ಟಾರಕರ ಜೈನ ಮಠದ ಪುಸ್ತಕ ಭಂಡಾರದಲ್ಲಿ ದೊರೆತ ಈ ಗ್ರಂಥದ ಒಂದು ಹಸ್ತಪ್ರತಿಯ ಪ್ರಾಕೃತ ಗಾಹೆಯನ್ನು ಗಮನಿಸಿ:
ಯೇಸ ಸುರಾಸುರ ಮಣುಸಿಂದವಂದಿಯಂ ಧೋದಘಾಯಿ ಕಂಮಮಳಂ|
ಪಣಮಾಮಿ ವಡ್ಡಮಾಣಂ ತಿಚ್ಛಂದಯಸ್ಸ ಕತ್ತಾರಂ||
ಕೆಲವು ಹಸ್ತಪ್ರತಿಗಳಲ್ಲಿ, ಕನ್ನಡ ಗದ್ಯ ಮೇಲೆ ಹೇಳಿದಂತೆ ‘ಶ್ರೀ ವೀರ ವರ್ಧಮಾನ ಭಟ್ಟಾರಕರ್ಗೆ’ ಎಂದು ಆರಂಭವಾಗಿದ್ದರೆ, ಇನ್ನು ಕೆಲವು ಹಸ್ತಪ್ರತಿಗಳಲ್ಲಿ ‘ಎಂದಿಂತು ಶ್ರೀ ವರ್ಧಮಾನ ಭಟ್ಟಾರಕರ್ಗೆ’ ಎಂದು ಪ್ರಾರಂಭವಾಗುತ್ತದೆ.
ಮೇಲೆ ನೋಡಿದಂತೆ ಎಲ್ಲ ಹಸ್ತಪ್ರತಿಗಳಲ್ಲೂ ಗ್ರಂಥಾರಂಭದಲ್ಲಿ ಕವಿ ವರ್ಧಮಾನ ಭಟ್ಟಾರಕರನ್ನು ಸ್ತುತಿಸಿರುವುದು ಎದ್ದುಕಾಣುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವಿದೆ. ಅದು ಏನೆಂದರೆ ಸಂಸ್ಕೃತದಲ್ಲಿ ‘ವರ್ಧಮಾನ’ ಎಂದಿರುವುದನ್ನು ಪ್ರಾಕೃತದಲ್ಲಿ ‘ವಡ್ಡಮಾಣ’ ಎಂದಿರುವುದು. ವರ್ಧಮಾನ ಎಂಬುದು ಪ್ರಾಕೃತದಲ್ಲಿ ವಡ್ಡಮಾಣ ಆದರೆ, ಕನ್ನಡದಲ್ಲಿ ಅದು ಸಂಕ್ಷೇಪಗೊಂಡು ‘ವಡ್ಡ’ ಮಾತ್ರ ಆಗಿರುವುದು ಶಾಸನಗಳಿಂದ ಸ್ಪಷ್ಟವಾಗಿದೆ.
ಶಾಸನಗಳಲ್ಲಿನ ವರ್ಧಮಾನ ಉಲ್ಲೇಖಗಳು
ವರ್ಧಮಾನ ಮಹಾವೀರ ಸ್ವಾಮಿಯ ಹೆಸರನ್ನು ವ್ಯಕ್ತಿಗಳಿಗೆ ಇಡುತ್ತಿದ್ದ ಹಲವಾರು ನಿದರ್ಶನಗಳು ಶ್ರವಣಬೆಳುಗೊಳ ಮೊದಲಾದ ಕಡೆಯ ಪ್ರಾಚೀನ ಶಿಲಾಶಾಸನಗಳಲ್ಲಿ ಸಿಕ್ಕುತ್ತವೆ. ಉದಾಹರಣೆಗೆ: ವರ್ಧಮಾನಮುನಿ, ವರ್ಧಮಾನದೇವ, ವರ್ಧಮಾನಾಚಾರಿ, ವರ್ಧಮಾನ ಹೆಗ್ಗಡೆ, ವರ್ಧಮಾನ ಸೆಟ್ಟಿ – ಇವು ಜೈನ ಮುನಿಗಳು, ಗೃಹಸ್ಥರು ಮುಂತಾದವರ ಹೆಸರುಗಳೆನ್ನುವುದು ಸ್ಪಷ್ಟ. ಜೈನ ಮುನಿಗಳಿಗೆ ವರ್ಧಮಾನದೇವ ಎಂಬ ಹೆಸರು ಇರುತ್ತಿದ್ದಂತೆ, ಅದೇ ಅರ್ಥದ ವಡ್ಡದೇವ ಎಂಬ ಹೆಸರು ಕೂಡಾ ಇರುತ್ತಿತ್ತು (ಎಕ–ಎಪಿಗ್ರಫಿ ಆಫ್ ಕರ್ನಾಟಕ– 2, ಶ್ರವಣಬೆಳಗೊಳ 55). ಹಾಗೇ ವರ್ಧಮಾನಾಚಾರ್ಯ್ಯ ವ್ರತಿ ಎಂಬುದರ ಬದಲಿಗೆ ವಡ್ಡಾಚಾರ್ಯ್ಯ ಬ್ರತಿ ಎಂಬ ಹೆಸರು ಕರೆದಿರುವುದನ್ನು ನೋಡಬಹುದು (ಎಕ 7, ಶಿಕಾರಿಪುರ 64).
ಅದೇ ರೀತಿ ವರ್ಧಮಾನೇಶ್ವರದೇವ ಎಂಬುದಕ್ಕೆ ವಡ್ಡೇಶರದೇವ ಎಂದು ಬಳಸಿರುವುದನ್ನು ಗಮನಿಸಬಹುದು (ಎಕ 6, ಕಡೂರು 35). ಪ್ರಾಚೀನ ಕಾಲದಲ್ಲಿ ಜೈನ ವ್ಯಕ್ತಿಗಳ ಹೆಸರಲ್ಲಿ ‘ವರ್ಧಮಾನ’ ಎಂಬುದಕ್ಕೆ (ಅಲ್ಲಿಯ ‘ಮಾನ’ ಎಂಬ ಭಾಗ ಉಚ್ಚಾರಣೆಯಲ್ಲಿ ಮತ್ತು ಹಾಗೇ ಪದರೂಪದಲ್ಲೂ) ಬಿಟ್ಟುಹೋಗಿ ಉಳಿದ ‘ವರ್ಧ’ ಎಂಬ ಭಾಗಕ್ಕೆ) ‘ವಡ್ಡ’ ಎನ್ನುವ ರೂಪ ಬಂದಿರುವುದು ಅಥವಾ ಬಳಸಿರುವುದು ಸ್ಪಷ್ಟ ಕಾಣುತ್ತದೆ. ಹೀಗಾಗಿ ವಡ್ಡ ಎನ್ನುವುದು ವರ್ಧಮಾನ ಎಂದಂತೆಯೇ ಪರಿಗಣಿತವಾಗುತ್ತಿತ್ತು. ಇದರಿಂದ ‘ವಡ್ಡ’ ಎಂಬುದು ‘ವರ್ಧಮಾನ’ ಎಂಬುದಕ್ಕೆ ಕನ್ನಡದಲ್ಲಿ ಬಂದಿರುವ ಒಂದು ಬದಲಿ ಹಾಗೂ ಸಂಕ್ಷಿಪ್ತ ಪದರೂಪ ಎಂದು ಹೇಳಬಹುದು. ಕನ್ನಡದ ಎಷ್ಟೋ ತದ್ಭವ ಪದಗಳು ಪ್ರಾಕೃತದಿಂದ ಕನ್ನಡಕ್ಕೆ ಬಂದಿರುವಂತೆ ಇದು ಸಹ ಸಹಜವಾಗಿಯೆ ಬಂದಿರಬಹುದು.
ಕನ್ನಡದಲ್ಲಿ ಜಾತಿ–ವೃತ್ತಿ ಸೂಚಕವಾದ ಒಡ್ಡ / ವಡ್ಡ ಎಂಬ ಪದ ಇದ್ದೂ, ವಡ್ಡರಾವುಳ ವಡ್ಡವ್ಯವಹಾರಿ ಎಂಬಂತಹ ಸಾದೃಶ್ಯದ ವಿಶಿಷ್ಟ ಪದಗಳಿದ್ದೂ, ಹಾಗೆಯೇ ವಡ್ಡಕಥೆ, ವಡ್ಡದಾರಿ, ವಡ್ಡಾಚಾರ ಎಂಬ ಇತರ ಪದಗಳು ಸಹ ಇದ್ದೂ, ಅವುಗಳ ಜೊತೆಯಲ್ಲಿ ಅರ್ಥದ ಗೊಂದಲವಾಗದಂತೆ ‘ವರ್ಧಮಾನ’ ಎಂಬುದಕ್ಕೆ ‘ವಡ್ಡ’ ಪದವನ್ನು ಬಳಸಿರುವುದು ಒಂದು ವಿಶೇಷ ಎನ್ನಿಸುತ್ತದೆ.
‘ವಡ್ಡಾರಾಧನೆ’ ಹೆಸರು ಹೇಗೆ ಬಂದಿರಬಹುದು?
ಕೃತಿಯ ಆರಂಭದಲ್ಲಿ ಕೃತಿಕಾರ ವರ್ಧಮಾನ ಮಹಾವೀರನನ್ನು ಭಕ್ತಿಯಿಂದ ನಮಸ್ಕಾರಪೂರ್ವಕವಾಗಿ ನೆನೆದಿರುವುದನ್ನು ನೋಡಿದರೆ, ಈ ಕೃತಿಯನ್ನು ಅವನು ವರ್ಧಮಾನ ಮಹಾವೀರನಿಗೇ ಅಂಕಿತಮಾಡಿದ್ದಂತೆ ಭಾಸವಾಗುತ್ತದೆ. ಸಂಸ್ಕೃತದ ‘ವರ್ಧಮಾನ’ಕ್ಕೆ ಪ್ರಾಕೃತದ ಗಾಹೆಗಳಲ್ಲಿ ‘ವಡ್ಡಮಾಣ’ ಎಂದೂ ಕನ್ನಡದ ಶಾಸನಗಳಲ್ಲಿ ‘ವಡ್ಡ’ ಎಂದೂ ಬಂದಿರುವುದನ್ನು ನೋಡಿದರೆ, ‘ವಡ್ಡಾರಾಧನೆ’ಯ ಹೆಸರಲ್ಲಿರುವ ‘ವಡ್ಡ’ ಎಂಬ ಭಾಗ ‘ವರ್ಧಮಾನ’ ಎಂಬುದರ ಬದಲಿಗೇ ಬಂದಿರುವ ಶಬ್ದ ಎಂಬಲ್ಲಿ ಅನುಮಾನವಿಲ್ಲ.
ಈ ಗ್ರಂಥಕ್ಕೆ ಕೃತಿಕಾರನು ಮೂಲತಃ ‘ವರ್ಧಮಾನಾರಾಧನೆ’ ಅಥವಾ ‘ವಡ್ಡಮಾಣಾರಾಧನೆ’ ಎಂಬ ಹೆಸರಿಟ್ಟಿದ್ದು ಅದೇ ಮುಂದೆ ‘ವಡ್ಡಾರಾಧನೆ’ ಎಂದಾಗಿರಬೇಕು. ಅಂದರೆ ಕಠೋರವಾದ ಮಹಾ ಆರಾಧನೆಯಿಂದ ಕೈವಲ್ಯ ಪಡೆದ ಮಹಾಪುರುಷರ ಕಥೆಗಳನ್ನು ಈ ಕೃತಿಯಲ್ಲಿ ಹೇಳಿರುವುದರಿಂದ, ಅವರೆಲ್ಲರಿಗೂ ಒಂದು ರೀತಿ ವರ್ಧಮಾನ ಮಹಾವೀರ ಮತ್ತು ಅವನ ಕಠೋರವಾದ ಮಹಾ ಆರಾಧನೆ –ತಪಸ್ಸು– ಮಾದರಿ ಎನಿಸಿದ್ದುದರಿಂದ ಅಂಥವರ ಕಥೆಗಳ ಈ ಗ್ರಂಥಕ್ಕೆ ‘ವರ್ಧಮಾನನ ರೀತಿಯ ಆರಾಧನೆ’ ಎಂಬಂತೆ, ಕೃತಿಕಾರ ಇದನ್ನು ‘ವರ್ಧಮಾನಾರಾಧನೆ’ ಅಥವಾ ‘ವಡ್ಡಮಾಣಾರಾಧನೆ’ ಎಂದು ಹೆಸರಿಸಿರಬೇಕು. ಅದೇ ಆಮೇಲೆ ಸಂಕ್ಷೇಪಗೊಂಡು ‘ವಡ್ಡಾರಾಧನೆ’ ಆಗಿರಬೇಕು. ಈ ಕೃತಿಯ ಹೆಸರಿಗೆ ಇದು ಉಚಿತವಾಗಿ ಒಪ್ಪುವ ವಿವರಣೆಯಾಗಿ ಕಾಣುತ್ತದೆ. ಇದರಿಂದ ಈ ಕೃತಿಯ ಹೆಸರಿನ ಒಗಟನ್ನು ಬಿಡಿಸುವ ಸರಿಯಾದ ಕೀಲಿಕೈ ಈಗ ದೊರೆತಂತಾಗಿದೆ. ಈ ಮೊದಲಿಗೆ ಬಂದಿರುವ ವಿವರಣೆಗಳು, ಈ ಕೃತಿಯ ಹೆಸರಿನ ಹಿನ್ನೆಲೆಯಲ್ಲಿ ‘ವರ್ಧಮಾನ’ ಅಥವಾ ‘ವಡ್ಡಮಾಣ’ ಇರುವುದು ಗೋಚರಿಸದೆ ಅಥವಾ ಗ್ರಹಿಕೆಗೆ ಬಾರದೆ ನೀಡಿದ ಪಂಡಿತ ನಿಷ್ಪತ್ತಿಯ ವಿವರಣೆಗಳಾಗಿವೆ ಎಂದು ಹೇಳಬೇಕಾಗಿದೆ.
ಕೆಲವು ಸಾಹಿತ್ಯ ಕೃತಿಗಳ ಹೆಸರುಗಳು ದೀರ್ಘವೆನಿಸಿದಾಗ, ಅವನ್ನೇ ಮೊಟಕು ಮಾಡಿಕೊಂಡೋ ಇಲ್ಲವೆ ಮೊಟಕಾದ ಬೇರೆ ಹೆಸರನ್ನೋ ಬಳಸುತ್ತ ಬ(ಂದಿ)ರುವುದುಂಟು. ಉದಾಹರಣೆಗೆ, ಪಂಪನ ‘ಆದಿದೇವ ಪುರಾಣಂ’ ಎಂಬುದನ್ನು ‘ಆದಿ ಪುರಾಣ’ ಎಂದೂ, ಅದೇ ಪಂಪನ ‘ವಿಕ್ರಮಾರ್ಜುನ ವಿಜಯಂ’ ಅನ್ನು ಸಂಕ್ಷಿಪ್ತವಾಗಿ ‘ಪಂಪ ಭಾರತ’ ಎಂದೂ, ರನ್ನನ ‘ಅಜಿತ ತೀರ್ಥಂಕರ ಪುರಾಣ ತಿಲಕಂ’ ಎಂಬುದನ್ನು ‘ಅಜಿತ ಪುರಾಣ’ ಎಂದೂ, ಅದೇ ರನ್ನನ ‘ಸಾಹಸಭೀಮ ವಿಜಯಂ’ ಅನ್ನು ‘ಗದಾಯುದ್ಧ’ ಎಂದೂ ಹೆಸರುಗಳನ್ನು ಮೊಟಕು ಮಾಡಿಕೊಂಡಿರುವುದುಂಟು. ಇದೇ ರೀತಿ ಕನ್ನಡದ ಮತ್ತು ಇತರ ಭಾಷೆಗಳ ಹಲವಾರು ಕೃತಿಗಳ ಹೆಸರುಗಳನ್ನು ಮೊಟಕು ಮಾಡಿಕೊಂಡಿರುವ ಉದಾಹರಣೆಗಳುಂಟು. ಹಾಗೆಯೇ ‘ವರ್ಧಮಾನಾರಾಧನೆ’ ಅಥವಾ ‘ವಡ್ಡಮಾಣಾರಾಧನೆ’ ಎಂಬುದನ್ನು ‘ವಡ್ಡಾರಾಧನೆ’ ಎಂದು ಸಂಕ್ಷೇಪ ಮಾಡಿಕೊಂಡಿರಬೇಕು ಅಥವಾ ಈ ಹಿಂದೆ ನಾವು ಶಾಸನೋಲ್ಲೇಖಗಳಲ್ಲಿ ಕಂಡಿರುವಂತೆ, ‘ವರ್ಧಮಾನ’ಕ್ಕೆ ಕನ್ನಡದಲ್ಲಿ ‘ವಡ್ಡ’ ಎನ್ನುವ ಪದ ಬಳಕೆಯಾಗುತ್ತಿದ್ದುದರಿಂದ ಕೃತಿಕಾರ ನೇರವಾಗಿಯೆ ಇದಕ್ಕೆ ‘ವರ್ಧಮಾನಾರಾಧನೆ’ ಎಂಬರ್ಥದಲ್ಲಿ ‘ವಡ್ಡಾರಾಧನೆ’ ಎಂಬ ಹೆಸರು ಕರೆದಿರಲಿಕ್ಕೂ ಸಾಕು. ಒಟ್ಟಿನಲ್ಲಿ ‘ವಡ್ಡಾರಾಧನೆ’ ಎಂದರೆ ‘ವರ್ಧಮಾನಾರಾಧನೆ’ ಎಂದೇ ಅರ್ಥ. – ಕೃಪೆ: ಪ್ರಜಾವಾಣಿ