Skip to content
Home » ಕನ್ನಡ » ವಿಚಾರ » ಗೇರುಸೊಪ್ಪೆಯಲ್ಲಿ 16ನೇ ಶತಮಾನಕ್ಕೆ ಸೇರಿದ ಅಪರೂಪದ ಜೈನ ವೀರಗಲ್ಲು ಪತ್ತೆ

ಗೇರುಸೊಪ್ಪೆಯಲ್ಲಿ 16ನೇ ಶತಮಾನಕ್ಕೆ ಸೇರಿದ ಅಪರೂಪದ ಜೈನ ವೀರಗಲ್ಲು ಪತ್ತೆ

    ಗೇರುಸೊಪ್ಪೆಯಲ್ಲಿ 16ನೇ ಶತಮಾನಕ್ಕೆ ಸೇರಿದ ಅಪರೂಪದ ಜೈನ ವೀರಗಲ್ಲು ಪತ್ತೆ.
    ಗೇರುಸೊಪ್ಪೆಯಲ್ಲಿ 16ನೇ ಶತಮಾನಕ್ಕೆ ಸೇರಿದ ಅಪರೂಪದ ಜೈನ ವೀರಗಲ್ಲು ಪತ್ತೆ.

    ಗೇರುಸೊಪ್ಪ: ಸಾಳುವ ರಾಜಮನೆತನದ ರಾಜಧಾನಿಯಾಗಿ ಹಲವಾರು ವರ್ಷಗಳ ಕಾಲ ಮೆರೆದ ಗೇರುಸೊಪ್ಪೆ/ಗೇರುಸೊಪ್ಪ (ಹೊನ್ನಾವರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆ)ದಲ್ಲಿ  16ನೇ ಶತಮಾನಕ್ಕೆ ಸೇರಿದ  ವಿಶಿಷ್ಟವಾದ ಸ್ತಂಭ ರೂಪದ ಜೈನ ವೀರಗಲ್ಲೊಂದು ಪತ್ತೆಯಾಗಿದೆ. ಇದನ್ನು ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್ ಪಿ ನಿತಿನ್ ಅವರು ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಇತ್ತೀಚೆಗೆ ಪತ್ತೆ ಮಾಡಿದ್ದಾರೆ.
    ಕೆಲವು ವರ್ಷಗಳ ಹಿಂದೆ ಗೇರುಸೊಪ್ಪೆ ಅಡವಿಯ ಮಧ್ಯದಲ್ಲಿ ಸಿಕ್ಕ ಈ ವೀರಗಲ್ಲನ್ನು ಬಸದಿಯ ಆವರಣದಲ್ಲಿ ಇತರ ಸಾಮಾನ್ಯ ಕಲ್ಲುಗಳಂತೆ ಯಾವುದೇ ಗಮನವನ್ನು ನೀಡದೆ ಇಡಲಾಗಿತ್ತು. ನಿತಿನ್ ಅವರು ಹಲವಾರು ಬಾರಿ ಗೇರುಸೊಪ್ಪೆಯನ್ನು ಸಂದರ್ಶಿಸಿದಾಗ ಇದರ ವಿಶಿಷ್ಟ ಸ್ವರೂಪವು ಅವರಲ್ಲಿ ಕುತೂಹಲವನ್ನು ಮೂಡಿಸಿತ್ತು, ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆ ಹಾಕಲು ಶುರು ಮಾಡಿದಾಗ ಅದಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಂಡಿದ್ದಾರೆ.
    ಪ್ರಸ್ತುತ ಈ ವೀರಗಲ್ಲನ್ನು ಗೇರುಸೊಪ್ಪೆಯ ಶ್ರೀ ವರ್ಧಮಾನ ತೀರ್ಥಂಕರ ಬಸದಿ ಆವರಣದಲ್ಲಿ ಇಡಲಾಗಿದೆ.

    “ಜೈನ ಧರ್ಮಕ್ಕೆ ಸಂಬಂಧಿಸಿದ ವೀರಗಲ್ಲುಗಳು ಸಿಗುವುದೇ ವಿರಳ ಅಂಥದ್ದರಲ್ಲಿ ಸ್ತಂಭ ರೂಪದ ವೀರಗಲ್ಲೊಂದು ಸಿಕ್ಕಿರುವುದು ವಿಶೇಷಗಳಲ್ಲಿ ವಿಶೇಷವಾದುದೆಂದು” www.jainheritagecentres.comನ ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾರದ ನಿತಿನ್ ರವರು ಅಭಿಪ್ರಾಯಪಟ್ಟಿದ್ದಾರೆ.

    ವೀರಗಲ್ಲಿನ ವಿವರ: ಕಂಬವು ಚೌಕಾಕಾರದಲ್ಲಿದ್ದು ಒಂದು ಭಾಗದಲ್ಲಿ ಯಾವುದೇ ಶಾಸನ ಅಥವಾ ಶಿಲ್ಪದ ಕೆತ್ತನೆಗಳಲ್ಲಿ. ಮೂರು ಭಾಗಗಳಲ್ಲಿ ಶಿಲ್ಪ ಹಾಗೂ ಶಾಸನ, ಮೇಲ್ಭಾಗದಲ್ಲಿ ಕೀರ್ತಿ ಮುಖವಿದೆ.
    ಮೊದಲ ಭಾಗ/ ಬಲ ಭಾಗ: ಈ ಭಾಗದಲ್ಲಿ ಶಾಸನ ಹಾಗೂ ಕೆತ್ತನೆಗಳಿವೆ. ಕೆಳಭಾಗದಲ್ಲಿ ಹೋರಾಡುತ್ತಿರುವ ವೀರರ ಉಬ್ಬು ಶಿಲ್ಪವಿದೆ ನಂತರದಲ್ಲಿ ಕತ್ತಿ ಗುರಾಣಿ ಹಿಡಿದಿರುವ ಇಬ್ಬರು ವೀರರು ಅವರಿಗೆ ಎದುರಾಗಿ ಇನ್ನೊಬ್ಬ ವೀರನ್ನು ಒಂದು ಕೈಯಲ್ಲಿ ಕತ್ತಿಯನ್ನು ಹಾಗೂ ಇನ್ನೊಂದು ಕೈಯಲ್ಲಿ ಈಟಿ ಯನ್ನು ಎಸೆಯುತ್ತಿದ್ದಾನೆ. ಇದರ ಮೇಲಿನ ಭಾಗದಲ್ಲಿ ಮೂವರು ಸ್ತ್ರೀಯರು ತಮ್ಮ ಎರಡೂ ಕೈಗಳನ್ನು ಎತ್ತಿ ಹಿಡಿದಿದ್ದಾರೆ. ಇದರ ಮೇಲ್ಭಾಗದಲ್ಲಿ ಶಾಸನವಿದೆ.


    ಮಧ್ಯಭಾಗ: ಈ ಭಾಗದಲ್ಲಿ ಶಾಸನ ಹಾಗೂ ಕೆತ್ತನೆಗಳಿವೆ. ಕೆಳಭಾಗದಲ್ಲಿ ಹೋರಾಡುತ್ತಿರುವ ವೀರರ ಉಬ್ಬು ಶಿಲ್ಪವಿದೆ. ನಂತರದಲ್ಲಿ ಕತ್ತಿ ಗುರಾಣಿ ಹಿಡಿದಿರುವ ಮೂವರು ವೀರರಿದ್ದಾರೆ, ಇದರ ಮೇಲಿನ ಭಾಗದಲ್ಲಿ ಇಬ್ಬರು ಅಪ್ಸರೆಯರು ತಮ್ಮ ಎರಡೂ ಕೈಗಳಲ್ಲಿ ಅಂಜಲಿಬದ್ಧನಾಗಿ ವೀರನು ಕುಳಿತಿರುವ ಪಲ್ಲಕ್ಕಿಯನ್ನು ಎತ್ತಿಹಿಡಿದಿದ್ದಾರೆ. ಪಲ್ಲಕ್ಕಿಯ ಮೇಲ್ಭಾಗದಲ್ಲಿ ಶಾಸನ, ಶಾಸನದ ಮೇಲ್ಭಾಗದಲ್ಲಿ ಕಾಯೋತ್ಸರ್ಗ ಭಂಗಿಯಲ್ಲಿರುವ ತೀರ್ಥಂಕರರ ಉಬ್ಬು ಶಿಲ್ಪವಿದೆ, ತೀರ್ಥಂಕರರ ಎಡಬಲಗಳಲ್ಲಿ ದೀಪವಿದೆ ಇದು ವೀರನು ಸ್ವರ್ಗಸ್ಥನಾಗಿರುವುದನ್ನು ಸೂಚಿಸುತ್ತದೆ.
    ಮೂರನೇ ಭಾಗ/ಎಡಭಾಗ: ಈ ಭಾಗದಲ್ಲಿ ಶಾಸನ ಹಾಗೂ ಕೆತ್ತನೆಗಳಿವೆ ಕೆಳಭಾಗದಲ್ಲಿ ಅಶ್ವಾರೂಢನಾಗಿ ಹೋರಾಡುತ್ತಿರುವ ವೀರನು ತನ್ನ ಒಂದು ಕೈಯಲ್ಲಿ ಈಟಿಯನ್ನು ಎಸೆಯುತ್ತಿದ್ದಾನೆ ಅವನ ವಿರುದ್ಧವಾಗಿ ಮತ್ತೊಬ್ಬನು ಹೋರಾಡುತ್ತಿದ್ದಾನೆ. ನಂತರದಲ್ಲಿ ಕತ್ತಿ ಗುರಾಣಿ ಹಿಡಿದಿರುವ ಇಬ್ಬರು ವೀರರು ಹಾಗೂ ಇನ್ನೊಬ್ಬ ವೀರನು ಒಂದು ಕೈಯಲ್ಲಿ ಕತ್ತಿಯನ್ನು ಹಾಗೂ ಇನ್ನೊಂದು ಕೈಯಲ್ಲಿ ಕಹಳೆಯನ್ನು ಊದುತ್ತಿದ್ದಾನೆ. ಇದರ ಮೇಲಿನ ಭಾಗದಲ್ಲಿ ಮೂವರು ಸ್ತ್ರೀಯರು ತಮ್ಮ ಎರಡೂ ಕೈಗಳನ್ನು ಎತ್ತಿ ಹಿಡಿದಿದ್ದಾರೆ ಇದರ ಮೇಲ್ಭಾಗದಲ್ಲಿ ಶಾಸನವಿದೆ.
    ಶಾಸನದ ವಿಶೇಷ: ಇದೊಂದು ಸ್ತಂಭರೂಪದ ಜೈನ ವೀರಗಲ್ಲಾಗಿದೆ. ಸಾಮಾನ್ಯವಾಗಿ ಜೈನ ವೀರಗಲ್ಲುಗಳು ಅತಿ ವಿರಳ. ಈ ಹಿನ್ನೆಲೆಯಲ್ಲಿ ಇದು ಕರ್ನಾಟಕದಲ್ಲಿ ಅತಿ ಅಪರೂಪದ ಜೈನ ವೀರಗಲ್ಲಾಗಿದೆ.
    ಶಾಸನದ ಸಾರಾಂಶ: ವೀತರಾಗ ದೇವರನ್ನು ನಮಿಸಿ ಶಾಸನದಲ್ಲಿ ಶಾಲಿವಾಹನ ಶಕ ವರುಷ 1428ನೆಯ ಕ್ರೋಧನ ಸಂವತ್ಸರದ ಫಾಲ್ಗುಣ ಶುದ್ಧ ಪಂಚಮಿ ಎಂದಿದೆ ಇದು ಕ್ರಿ.ಶ. 10 ಮಾರ್ಚ್ 1506 ಶನಿವಾರಕ್ಕೆ ಸರಿ ಹೊಂದುತ್ತದೆ. ಸಿಂಹಾಸನಾಧೀಶ್ವರರಾದ ಸೂರೆಗಾರ, ಕಲಿ ತ್ರಿನೇತ್ರ ಮುಂತಾದ ಪ್ರಶಸ್ತಿಗಳಿಗೆ ಅರ್ಹನಾದ ಇಮ್ಮಡಿ ಸಾಳವಮಲ್ಲ ಪ್ರಭುವನ್ನು ಉಲ್ಲೇಖಿಸಲಾಗಿದೆ. ಇವನು  ಮುಡುಪಿ ಸ್ವರ್ಗಸ್ಥನದುದನ್ನು ಶಾಸನ ತಿಳಿಸುತ್ತದೆ. ಈ ಶಾಸನವನ್ನು ಬೆಂಮಣ ನಾಯಕನು ಹಾಕಿಸಿದಂತೆ ಹೇಳುತ್ತದೆ.

    ”ಈ ಶಾಸನದಲ್ಲಿ ಅಲ್ಲಲ್ಲಿ ಅಕ್ಷರಗಳು ಸವೆದು ತೃಟಿತವಾಗಿವೆ. ಬಹುಶಃ ಅದು ಸ್ಪಷ್ಟವಾಗಿದ್ದಲ್ಲಿ ಇನ್ನೂ ಹೆಚ್ಚಿನ ವಿವರಗಳು ತಿಳಿಯಬಹುದಿತ್ತೆಂದು” ಶ್ರೀ ನಿತಿನ್ ರವರು ತಿಳಿಸಿದ್ದಾರೆ.

    ಶಾಸನವನ್ನು ಓದಿ ಮಾರ್ಗದರ್ಶನ ನೀಡಿದ ಹರಿಹರದ ಡಾ. ರವಿಕುಮಾರ್ ಕೆ. ನವಲಗುಂದ ಹಾಗೂ ಶಾಸನದ ಅಧ್ಯಯನಕ್ಕೆ ಸಹಕರಿಸಿದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ದಿಗಂಬರ್ ಜೈನ ಟ್ರಸ್ಟ್ (ರಿ)ನ ಅಧ್ಯಕ್ಷರಾದ ಶ್ರೀ ಎಂ ಲೋಕರಾಜ ಜೈನ್, ಗೇರುಸೊಪ್ಪೆಯ ಶ್ರೀ ನಾಗರಾಜ್ ಜೈನ್ ಹಾಗೂ ಶ್ರೀ ವೆಂಕಟರಮಣ ಅವರಿಗೆ ನಿತಿನ್ ರವರು ತಮ್ಮ ಕೃತ ಜ್ಞತೆಯನ್ನು ತಿಳಿಸಿದ್ದಾರೆ.

    ಗೇರುಸೊಪ್ಪೆಯು ಹೊನ್ನಾವರದಿಂದ 36 ಕಿ.ಮಿ. ದೂರದಲ್ಲಿ, ಕಾರವಾರದಿಂದ 126 ಕಿ.ಮಿ. ದೂರದಲ್ಲಿ, ಹಾಗೂ ಜೋಗಜಲಪಾತದಿಂದ 44 ಕಿ.ಮಿ.ದೂರದಲ್ಲಿದೆ.
    – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ

    error: Jain Heritage Centres - Celebrating Jain Heritage.....Globally!